ಕಾವೇರಿ, ಕೊಡವ ಹೆಣ್ಣು ಮಕ್ಕಳನ್ನು ಅವಮಾನಿಸಿ ಪೋಸ್ಟ್ ಹಾಕಿದ್ದ ದಿವಿನ್ ದೇವಯ್ಯ ಬಂಧನ

Prasthutha|

►ಅಮಾಯಕ ಮುಸ್ಲಿಮ್ ಬಾಲಕನ ಹೆಸರು ಹರಿಯಬಿಟ್ಟಿದ್ದ ದುಷ್ಕರ್ಮಿಗಳು

- Advertisement -

ಮಡಿಕೇರಿ: ನಕಲಿ ಇನ್ಸ್ ಸ್ಟಾಗ್ರಾಮ್ ಖಾತೆ ತೆರೆದು ಕಾವೇರಿ ಹಾಗೂ ಕೊಡವ ಜನಾಂಗವನ್ನು ಅವಹೇಳನ ಮಾಡಿದ್ದ ಪ್ರಕರಣವನ್ನು ಭೇದಿಸಿರುವ ಮಡಿಕೇರಿ ಪೊಲೀಸರು, ವಿರಾಜಪೇಟೆ ತಾಲೂಕಿನ ಪಾಲಂಗಾಲ ಗ್ರಾಮದ ನಿವಾಸಿ ಕೆ.ಸಿ.ದಿವಿನ್ ದೇವಯ್ಯ (29) ಎಂಬ ಕೊಡವ ಯುವಕನನ್ನು ಬಂಧಿಸಿದ್ದಾರೆ. 

ಮುಸ್ಲಿಮರು ಮತ್ತು ಟಿಪ್ಪು ಸುಲ್ತಾನ್ ವಿರುದ್ಧ ನಿರಂತರವಾಗಿ ಅವಹೇಳನಗೆಯ್ಯುತ್ತಿರುವ ಕೊಡವ ಹಾಲಿಕ್ಸ್ ಎಂಬ ಇನ್ಸ್ ಸ್ಟಾಗ್ರಾಮ್ ಪೇಜ್ ವೊಂದರಲ್ಲಿ  ಟಿಪ್ಪು ಸುಲ್ತಾನ್ ವಿರುದ್ಧ ಹಾಕಲಾಗಿದ್ದ ಪೋಸ್ಟ್ ವೊಂದಕ್ಕೆ ijvbkoggklvy ಎಂಬ ಐಡಿಯಿಂದ ಪ್ರತಿಕ್ರಿಯಿಸಿ, ಕೊಡವರು, ಕಾವೇರಿಯ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಹಾಕಲಾಗಿತ್ತು. ಈ ಬಗ್ಗೆ ಜುಲೈ 7ರಂದು ಡಿವೈಎಸ್ ಪಿ ಅವರಿಗೆ ದೂರು ನೀಡಲಾಗಿತ್ತು. ಬಳಿಕ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು.

- Advertisement -

ಆದರೆ ಇದಾದ ಮರುದಿನವೇ ಮುಹಮ್ಮದ್ ಅಶ್ಫಾಕ್ ಎಂಬ ಹೆಸರಿನ ಬಾಲಕನ ಚಿತ್ರವನ್ನು ಎಡಿಟ್ ಮಾಡಿ, ಈತನೇ ಕಾವೇರಿಯನ್ನು ಹಾಗೂ ಕೊಡವರನ್ನು ಅವಹೇಳನ ಮಾಡಿರುವುದಾಗಿ ಪೋಸ್ಟ್ ವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಏಕಾಏಕಿ ಮುಹಮ್ಮದ್ ಅಶ್ಫಾಕ್ ಹೆಸರು ಮುನ್ನೆಲೆಗೆ ಯಾರು ತಂದರು ಎಂಬುದು ಇನ್ನೂ ತಿಳಿದಿಲ್ಲ.

ಮುಹಮ್ಮದ್ ಅಶ್ಫಾಕ್ ಎಂಬ ಬಾಲಕನ ಹೆಸರು ಕೇಳಿಬರುತ್ತಿದ್ದಂತೆ ಕೊಡವ ಸಂಘಟನೆಗಳು, ವಿಶ್ವ ಹಿಂದೂ ಪರಿಷತ್, ಭಜರಂಗದಳ ಸೇರಿದಂತೆ ವಿವಿಧ ಸಂಘಟನೆಗಳು ಕೊಡಗಿನ ವಿವಿಧ ಪೊಲಿಸ್ ಠಾಣೆಗಳಲ್ಲಿ ದೂರು ದಾಖಲು ಮಾಡಿದ್ದವು. ಕೂಡಲೇ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಬೇಕೆಂದು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದವು.

ಇದರ ಮಧ್ಯೆ ಈ ಪ್ರಕರಣದಲ್ಲಿ ಯಾವುದೇ ಸಂಬಂಧ ಇಲ್ಲದ ತನ್ನ ಮಗನ ಫೋಟೋ ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಅಮಾಯಕ ವಿದ್ಯಾರ್ಥಿಯ ತಂದೆ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದ ಸೈನುದ್ದೀನ್, ಮಡಿಕೇರಿ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

 ಕಾವೇರಿ ಹಾಗೂ ಕೊಡವರ ಅವಹೇಳನ ಮಾಡಿರುವ ಘಟನೆಯ ದೂರು ನೀಡಿರುವ ಫೋಟೋ ಹಾಗೂ ವೀಡಿಯೋ ಜೊತೆಗೆ ತನ್ನ ಮಗ ಮುಹಮ್ಮದ್ ಅಶ್ಫಾಕ್ ನ ಫೋಟೋವನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿದೆ. ಈ ಘಟನೆಗೂ ನನ್ನ ಮಗನಿಗೂ ಯಾವುದೇ ಸಂಬಂಧ ಇಲ್ಲದಿದ್ದರೂ ಈ ರೀತಿ ಮಾಡಿರುವುದರಿಂದ ಇಡೀ ಕುಟುಂಬ ಮಾನಸಿಕವಾಗಿ ನೊಂದಿದ್ದು, ಮಗನ ಫೋಟೋ ಬಳಸಿ ಅಪಪ್ರಚಾರ ನಡೆಸುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ತಂದೆ ದೂರಿನಲ್ಲಿ ಆಗ್ರಹಿಸಿದ್ದರು.

ಆದರೂ ಪೊಲೀಸರು ಮುಹಮ್ಮದ್ ಅಶ್ಫಾಕ್ ನನ್ನು ವಶಕ್ಕೆ ಪಡೆದು ಸುಮಾರು 10 ಗಂಟೆಗಳ ಕಾಲ ವಿಚಾರಣೆ ನಡೆಸಿದರು. ಆದರೆ ಆತನ ಪಾತ್ರ ಇಲ್ಲ ಎಂಬುದು ಖಾತರಿಯಾದ ಬಳಿಕ ಆತನನ್ನು ಬಿಟ್ಟು ಕಳುಹಿಸಿದ್ದರು.

ಅಶ್ಫಾಕ್ ನನ್ನು ಬಿಟ್ಟು ಕಳುಹಿಸುತ್ತಿದ್ದಂತೆ ಬಿಜೆಪಿ ನಾಯಕರು ಮತ್ತು ಸಂಘಪರಿವಾರದ ನಾಯಕರು ಆರೋಪಿಯನ್ನು ಬಂಧಿಸುವಂತೆ ಪೊಲೀಸರ ಮೇಲೆ ಒತ್ತಡ ಹೇರಲು ಜಿಲ್ಲಾ ಬಂದ್ ಗೆ ಕೂಡ ಕರೆ ನೀಡುವುದಾಗಿ ಎಚ್ಚರಿಸಿದ್ದರು. ಅದರಂತೆ ನಾಳೆಯಿಂದ ಜಿಲ್ಲಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿತ್ತು.

ಆದ್ದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸರು, ತಂತ್ರಜ್ಞಾನ ಬಳಸಿ ಭಾನುವಾರ ಆರೋಪಿ ಕೆ.ಸಿ.ದಿವಿನ್ ದೇವಯ್ಯನನ್ನು ಬಂಧಿಸಿದ್ದಾರೆ.

ದಿವಿನ್ ದೇವಯ್ಯ ಯಾವ ಸಂಘಟನೆಯೊಂದಿಗೆ ನಂಟು ಹೊಂದಿದ್ದಾನೆ ಎಂಬುದನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಶಾಂತಿಗೆ ಧಕ್ಕೆ ತರಲು ಪ್ರಯತ್ನಿಸಿದ ಈತನ ಹಿನ್ನೆಲೆಯಲ್ಲಿ ಬಹಿರಂಗಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮಾತ್ರವಲ್ಲ ಮುಹಮ್ಮದ್ ಅಶ್ಫಾಕ್ ಅವರ ತಂದೆ ಕೊಟ್ಟ ದೂರು ದಾಖಲಿಸಿ ತನಿಖೆ ಕೈಗೊಳ್ಳಬೇಕು. ಅಮಾಯಕ ಬಾಲಕನ ಫೋಟೋ ದುರ್ಬಳಕೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಿ ಜಿಲ್ಲೆಯಲ್ಲಿ ಇಂತಹ ಕೃತ್ಯವೆಸಗುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಸಾರ್ವಜನಿಕ ವಲಯದಲ್ಲಿ ಆಗ್ರಹ ಕೇಳಿಬಂದಿದೆ.



Join Whatsapp