ಜನನ, ಮರಣ ನೋಂದಣಿ ಶೇ.100ರಷ್ಟು ದಾಖಲಿಸಲು ಜಿಲ್ಲಾಧಿಕಾರಿ ಸೂಚನೆ

Prasthutha|

ಮಂಗಳೂರು: ಜನನ ಮರಣ ನೋಂದಣಿ ಕಡ್ಡಾಯವಾಗಿ ನೂರಕ್ಕೆ ನೂರರಷ್ಟು ದಾಖಲಾಗುವಂತೆ ಹಾಗೂ ಈ ಪ್ರಕ್ರಿಯೆಯಲ್ಲಿ ಯಾವುದೇ ನೋಂದಣಿ ಬಿಟ್ಟು ಹೋಗದಂತೆ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

- Advertisement -

ಅವರು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಣದಲ್ಲಿ ಜಿಲ್ಲಾ ಮಟ್ಟದ ಜನನ ಮರಣ ನೋಂದಣಿ ಕುರಿತ ಸಮನ್ವಯ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮರಣದ ನೋಂದಣಿ ಮಾಡುವಾಗ ಮರಣ ಕಾರಣವನ್ನು ನಿಖರವಾಗಿ ದಾಖಲಿಸಬೇಕು ಹಾಗೂ ಮರಣ ನೋಂದಣಿ ಮಾಡುವಾಗ ನಮೂನೆ-4ಅನ್ನು ತಂತ್ರಾಂಶದಲ್ಲಿ ಅಪ್ ಲೋಡ್ ಮಾಡಬೇಕು, ಕೃಷಿ ಅಂಕಿ ಅಂಶ ಸಮನ್ವಯ ಸಮಿತಿಗೆ ಸಂಬಂಧಿಸಿದಂತೆ 2022-23ನೇ ಸಾಲಿನ ಮುಂಗಾರು ಋತುವಿನ ಬೆಳೆ ಅಂದಾಜು ಸಮೀಕ್ಷೆ ಯೋಜನೆಯಡಿ ಬೆಳೆ ಕಟಾವು ಪ್ರಯೋಗಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಮುಖ್ಯವಾಗಿ ಯಾವುದೇ ಪ್ರಯೋಗಗಳು ವ್ಯತ್ಯಯವಾಗದಂತೆ ಕ್ರಮವಹಿಸುವಂತೆ ಅವರು ತಿಳಿಸಿದರು.

- Advertisement -

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಯವರು 11ನೇ ಕೃಷಿ ಗಣತಿ ಕಾರ್ಯಕ್ಕೆ ಚಾಲನೆ ನೀಡಿ, ಮೂಲ ಕಾರ್ಯಕರ್ತರಾದ ಗ್ರಾಮಕರಣೀಕರು ಯಾವುದೇ ಸರ್ವೆ/ಸಬ್ ಸರ್ವೆ ನಂಬ್ರಗಳು ಬಿಟ್ಟು ಹೋಗದ ರೀತಿಯಲ್ಲಿ ಗಣತಿ ಕಾರ್ಯವನ್ನು ನಡೆಸಿ 2022ರ ಡಿಸೆಂಬರ್ 31ರೊಳಗೆ ಪೂರ್ಣಗೊಳಿಸುವಂತೆ ಜಿಲ್ಲೆಯ ಎಲ್ಲಾ ತಹಶೀಲ್ದಾರರಿಗೆ ನಿರ್ದೇಶನ ನೀಡಿದರು.

ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಸೀತಾ, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ನಾಯಕ್, ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರವೀಣ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ಕಿಶೋರ್ ಕುಮಾರ್ ಹಾಗೂ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸಭೆಯಲ್ಲಿದ್ದರು.



Join Whatsapp