ಗೋ ವ್ಯಾಪಾರಿಗಳ ಮನೆ, ಅಂಗಡಿ ಜಪ್ತಿ ಮಾಡಿದ ಜಿಲ್ಲಾಡಳಿತದ ನಡೆ ಅಧಿಕಾರ ದುರುಪಯೋಗದ ಪರಮಾವಧಿ: ಎಸ್‌ಡಿಪಿಐ ಆಕ್ರೋಶ

Prasthutha|

ಮಂಗಳೂರು: ಮಂಗಳೂರಿನ ಕಾಟಿಪಳ್ಳದಲ್ಲಿ ಅಕ್ರಮ ಜಾನುವಾರು ಮಾಂಸಕ್ಕಾಗಿ ವಧೆ ಮಾಡಿದ್ದಾರೆ ಎಂಬ ಕಾರಣಕ್ಕಾಗಿ ಮೂವರು ವ್ಯಾಪಾರಿಗಳ ಮನೆ ಮತ್ತು ಅಂಗಡಿಯನ್ನು ಶಾಸಕ ಭರತ್ ಶೆಟ್ಟಿ ಒತ್ತಡದ ಮೇರೆಗೆ ದ.ಕ ಜಿಲ್ಲಾಡಳಿತ ಮುಟ್ಟುಗೋಲು ಹಾಕಿದ ನಡೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ದ.ಕ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.

- Advertisement -

ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಎಸ್‌ಡಿಪಿಐ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಅವರು, ಶಾಸಕ ಭರತ್ ಶೆಟ್ಟಿ ಕ್ಷೇತ್ರವು ಅಭಿವೃದ್ಧಿಯಲ್ಲಿ ಶೂನ್ಯ ಸಾಧನೆ ಹಾಗೂ ಕೊರೋನಾ ಸಂದರ್ಭದಲ್ಲಿ ಮೃತಪಟ್ಟ ಹಿಂದು ಮಹಿಳೆಯೊಬ್ಬಳ ಹೆಣವನ್ನು ಶವಸಂಸ್ಕಾರ ಮಾಡಲು ರುದ್ರಭೂಮಿಯಲ್ಲಿ ಅವಕಾಶ ನೀಡಲಿಲ್ಲ. ಆ ಶವವನ್ನು ರಾತ್ರಿಯಿಡೀ ಮಂಗಳೂರು ನಗರದಲ್ಲಿ ಸುತ್ತಾಡುವಂತೆ ಮಾಡಿದ್ದರು. ಇದರಿಂದ ಭರತ್ ಶೆಟ್ಟಿಯ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ಇವರಿಗೆ ಈ ಬಾರಿ ಟಿಕೆಟ್ ಸಿಗುವುದು ಸಂಶಯ ಎಂಬ ಮಾತುಗಳು ಸಾರ್ವಜನಿಕವಾಗಿ ಕೇಳಿ ಬರುತ್ತಾ ಇದೆ. ಇವರು ತಮ್ಮ ಶಾಸಕ ಸ್ಥಾನದ ಅಧಿಕಾರವನ್ನು ದುರುಪಯೋಗ ಪಡಿಸಿ ಗೋ ವ್ಯಾಪಾರಿಗಳ ಮನೆಯನ್ನು ಮತ್ತು ಅಂಗಡಿಯನ್ನು ಮುಟ್ಟುಗೋಲು ಹಾಕಿ ಗೂಂಡಾ ರಾಜ್ಯ ಎಂಬ ಕುಖ್ಯಾತಿ ಹೊಂದಿರುವ ಯೋಗಿಯ ಯುಪಿ ಮಾದರಿಯಂತೆ ಮಾಡಿ ಸಂಘಪರಿವಾರದ ನಾಯಕರ ಮೆಚ್ಚುಗೆ ಗಳಿಸಿ ಪುನಃ ಟಿಕೆಟ್ ಪಡೆಯುವ ಹುನ್ನಾರವಾಗಿದೆ. ಈ ಘಟನೆಯು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ, ಮನೆ ಮುಟ್ಟುಗೋಲು ಹಾಕಬೇಕೆಂಬ ಮನವಿಯಲ್ಲಿ ಅಕ್ರಮವಾಗಿ ದನವನ್ನು ಹತ್ಯೆ ಮಾಡುವುದರಿಂದ ಕೋಮು ಗಲಭೆಯ ಸಾಧ್ಯತೆ ಇದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಕೋಮು ಗಲಭೆಯ ತಡೆಗಾಗಿ ಜಾನುವಾರು ಹತ್ಯೆ ಪ್ರತಿಬಂಧಕ ಕಾಯಿದೆಯನ್ನು ತಂದಿರುವುದಲ್ಲ “ಕೃಷಿ ಮತ್ತು ಪಶು ಸಂಗೋಪನೆಯ ಅಭಿವೃದ್ಧಿಯ ಉದ್ದೇಶಕ್ಕಾಗಿ ಈ ಕಾಯಿದೆಯನ್ನು ಜಾರಿಗೆ ತರಲಾಗಿದೆ ಎಂದು ಕಾಯಿದೆಯಲ್ಲಿ ಉಲ್ಲೇಖಿಸಿದ್ದನ್ನು ಜಿಲ್ಲಾಡಳಿತ ಗಮನಿಸಬೇಕು. ಇಲ್ಲಿ ಮನೆ ಮುಟ್ಟುಗೋಲು ಹಾಕಿದ್ದು ಅಲ್ಲದೇ ಅದರ ಆರ್ ಟಿ ಸಿ ಯನ್ನು ಸರಕಾರದ ಹೆಸರಿನಲ್ಲಿ ಬದಲಾವಣೆ ಮಾಡಿ ಜಿಲ್ಲಾಡಳಿತ ಸರ್ವಾಧಿಕಾರಿ, ದಬ್ಬಾಳಿಕೆಯ ನೀತಿಯನ್ನು ಅನುಸರಿಸುತ್ತಿರುವುದು ಅಕ್ಷ್ಯಮ್ಯ ಅಪರಾಧವಾಗಿದೆ ಎಂದರು.
ದ.ಕ ಜಿಲ್ಲಾಡಳಿತ ಶಾಸಕರ ಇಂತಹ ಕಾನೂನು ವಿರೋಧಿ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ವರ್ತಿಸಬೇಕೆಂದು ಎಸ್‌ಡಿಪಿಐ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp