ಬೆಂಗಳೂರು: ಆಟೋ ಚಾಲಕರು ಸ್ವಾಭಿಮಾನಿಗಳಾಗಿ ಬಾಳಬೇಕೆಂಬ ದೃಷ್ಟಿಯಿಂದ ಎಲ್ಲ ಅಗತ್ಯ ನೆರವು ನೀಡಲಾಗುವುದು ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
67 ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರದ ಕುರುಬರಹಳ್ಳಿಯ ಚಾಲುಕ್ಯ ವೃತ್ತದಲ್ಲಿಂದು ಕೋಟಿಕಂಠ ಗಾಯನ ಕಾರ್ಯಕ್ರಮ ಮತ್ತು 2 ಸಾವಿರ ಆಟೋ ಚಾಲಕರಿಗೆ ಸಮವಸ್ತ್ರವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈಗಾಗಲೇ ಮಹಿಳಾ ಒಕ್ಕೂಟಗಳಿಗೆ ಪ್ರತಿವರ್ಷ ಮಹಾಲಕ್ಷ್ಮಿ ಎಜುಕೇಷನ್ ಟ್ರಸ್ಟ್ ವತಿಯಿಂದ ಒಂದೊಂದು ಒಕ್ಕೂಟಕ್ಕೆ ತಲಾ 1 ಲಕ್ಷ ರೂ ನೀಡಲಾಗುತ್ತಿದೆ. ಈ ಮೂಲಕ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಭಿಗಳಾಗ ಬೇಕೆನ್ನುವುದು ನಮ್ಮ ಆಶಯವಾಗಿದೆ. ಹೊಸ ಆಟೋ ಖರೀದಿಸುವವರಿಗೆ ತಿಂಗಳಿಗೆ ಹತ್ತು ಆಟೋಗಳಿಗೆ ತಲಾ 30 ಸಾವಿರ ರೂ ನೀಡಲಾಗುವುದು ಎಂದು ಭರವಸೆ ನೀಡಿದರು.
ವೃಷಭಾವತಿ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ನಿಂದ ಸಾಲದ ವ್ಯವಸ್ಥೆ ಕೂಡ ಮಾಡಲಾಗುವುದು. ಆಟೋಚಾಲಕರು ಸ್ವಾಭಿಮಾನಿಗಳಾಗಬೇಕೆನ್ನುವುದು ನನ್ನ ಆಶಯವಾಗಿದೆ. ಕ್ಷೇತ್ರದ ಎಲ್ಲ ಬಿಜೆಪಿ ಮುಖಂಡರು ನಿಮ್ಮೆಲ್ಲರ ಕಷ್ಟಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು.
ಕ್ಷೇತ್ರ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ನೂತನ ಶಿಕ್ಷಣ ವ್ಯವಸ್ಥೆಗೆ ತಕ್ಕಂತೆ 45 ಕೋಟಿ ರೂ ವೆಚ್ಚದಲ್ಲಿ 6 ಸಾವಿರ ಮಕ್ಕಳು ಓದುವಂತೆ ಸರ್ಕಾರಿ ಶಾಲೆಗಳನ್ನು ಕಟ್ಟಲಾಗಿದೆ. ಈ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳನ್ನೂ ಕೂಡ ಮೀರಿಸುವಂತೆ ನಿರ್ಮಾಣ ಮಾಡಲಾಗಿದೆ.ಇಲ್ಲಿ ಪಿಯುಸಿ ತನಕ ಉಚಿತವಾಗಿ ಶಿಕ್ಷಣ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ನಾರಾಯಣ್, ಉಪಾಧ್ಯಕ್ಷ ಜಯರಾಮಯ್ಯ, ಬಿಬಿಎಂಪಿ ಮಾಜಿ ಉಪಮೇಯರ್ ಎಸ್.ಹರೀಶ್,ಮಾಜಿ ಸದಸ್ಯ ಪದ್ಮಾವತಿ ಶ್ರೀನಿವಾಸ್, ಮಂಡಲದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಶಿವಾನಂದ ಮೂರ್ತಿ,ಅವೀನ್ ಆರಾಧ್ಯ,ನಾಗರತ್ನ ಲೋಕೇಶ್,ಉಮಾ ಶ್ರೀನಿವಾಸ್,ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು