ಕೋವಿಡ್ ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ವಿತರಣೆ

Prasthutha|

ಬೆಂಗಳೂರು: ಕೋವಿಡ್ – 19 ನಿಂದ ತೀವ್ರ ಬಾಧಿತವಾಗಿ ಮೃತಪಟ್ಟ ಕುಟುಂಬಗಳಿಗೆ ಮಾನವೀಯತೆ ದೃಷ್ಟಿಯಿಂದ ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದಿಂದ ಐದು ಸಾವಿರ ರೂ ಪರಿಹಾರ ಧನ ವಿತರಣೆಗೆ ಚಾಲನೆ ನೀಡಲಾಗಿದೆ. ಜತೆಗೆ ಮಡಿವಾಳ ಜನಾಂಗದ ಜನಗಣತಿಗಾಗಿ ಇದೇ ಮೊದಲ ಬಾರಿಗೆ ವಿನೂತನವಾದ ಮೊಬೈಲ್ ಲಿಂಗ್ ಗೆ ಚಾಲನೆ ಕೊಡಲಾಗಿದೆ.

- Advertisement -


ಮೊದಲ ಹಂತದಲ್ಲಿಂದು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ 26 ಕುಟುಂಬಗಳಿಗೆ ಮಲ್ಲೇಶ್ವರಂನ ಹರಿಶ್ವಚಂದ್ರ ಘಾಟ್ ಹಿಂಭಾಗದ ಲಕ್ಷ್ಮೀನಾರಾಯಣಪುರದ ವಡಲೂರು ಜ್ಯೋತಿ ರಾಮಲಿಂಗ ಸ್ವಾಮಿಗಳ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಕುಟುಂಬದ ಅವಲಂಬಿತರಿಗೆ ತಲಾ ಐದು ಸಾವಿರ ರೂಪಾಯಿ ನೆರವು ನೀಡಲಾಯಿತು. ರಾಜ್ಯದಾದ್ಯಂತ ಒಟ್ಟು 142 ಕುಟುಂಬಗಳಿಗೆ ಪರಿಹಾರ ಒದಗಿಸಲಾಗುತ್ತಿದೆ.


ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ನಿಗಮ ನಿಯಮಿತದ ಅಧ್ಯಕ್ಷ ರಘು ಆರ್. ಕೌಟಿಲ್ಯ ಪರಿಹಾರ ಧನ ವಿತರಿಸಿದರು.
ಬಳಿಕ ಮಡಿವಾಳ ಜನಾಂಗದ ಜನಗಣತಿಗಾಗಿ ಮೊಬೈಲ್ ಲಿಂಕ್ ಬಿಡುಗಡೆ ಮಾಡಿ ಮಾತನಾಡಿ, ಕೋವಿಡ್ ನಿಂದ ಬಾಧಿತವಾಗಿರುವ ಹಿಂದುಳಿದ ಸಮುದಾಯದ ಆರ್ಥಿಕ, ಸಾಮಾಜಿಕ ಸಮಸ್ಯೆಗಳಿಗೆ ನಿಗಮ ಸೂಕ್ತ ರೀತಿಯಲ್ಲಿ ಸ್ಪಂದಿಸಲಿದೆ. ಸಂಕಷ್ಟದಲ್ಲಿರುವವರಿಗೆ ನಿಗಮದಿಂದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪರಿಕರಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

- Advertisement -


ತೊಂದರೆಯಲ್ಲಿರುವವರಿಗೆ ದೇವರಾಜ ಅರಸು ಅಭಿವೃದ್ಧಿ ನಿಗಮ, ಮಡಿವಾಳ ಮಾಚಿದೇವರ ನಿಗಮದ ಕಾರ್ಯಕ್ರಮಗಳು ಹೆಚ್ಚಿನ ರೀತಿಯಲ್ಲಿ ಸಹಕಾರಿಯಾಗಲಿವೆ. ಸಂಘ ಸಂಸ್ಥೆಗಳು ಸರ್ಕಾರದ ಸೌಲಭ್ಯಗಳನ್ನು ದೊರಕಿಸಿಕೊಡಲು ಸಂಪರ್ಕ ಸೇತುವೆಯಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಸಂಘದ ಅಧ್ಯಕ್ಷ ಬಿ.ಆರ್. ಪ್ರಕಾಶ್ ಮಾತನಾಡಿ, ಮಡಿವಾಳ ಜನಾಂಗದ ಸಾಮಾಜಿಕ, ಆರ್ಥಿಕ ಪ್ರಗತಿಗೆ ಪೂರಕವಾಗುವ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಉದ್ದೇಶದಿಂದ ಮಡಿವಾಳರ ಜನಗಣತಿಗಾಗಿ ಮೊಬೈಲ್ ಲಿಂಕ್ ಗೆ ಚಾಲನೆ ನೀಡಲಾಗಿದೆ. ಆ್ಯಪ್ ನಲ್ಲಿ ಪ್ರತಿಯೊಂದು ವೈಯಕ್ತಿಕ ಮಾಹಿತಿ ಅಡಕವಾಗಿದ್ದು, ನಿಖರವಾದ ಜನಸಂಖ್ಯೆಯಿಂದ ಮುಂಬರುವ ದಿನಗಳಲ್ಲಿ ಮಡಿವಾಳ ಸಮುದಾಯಕ್ಕೆ ಬೇಕಾದ ಕಾರ್ಯಕ್ರಮಗಳ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಜನಾಂಗದ ಪ್ರತಿಯೊಬ್ಬರಿಗೂ ಮೊಬೈಲ್ ಮೂಲಕ ಲಿಂಕ್ ಕಳುಹಿಸಿಕೊಟ್ಟು ವಿವರಗಳನ್ನು ಸಂಗ್ರಹಿಸಲಾಗುವುದು ಎಂದರು.


ಕೋವಿಡ್ ನಿಂದ ಮಡಿವಾಳ ಸಮುದಾಯ ತೀವ್ರ ಬಾಧಿತವಾಗಿದ್ದು, ಈ ಸಂಬಂಧರಾಜ್ಯಾದ್ಯಂತ ಸಮೀಕ್ಷೆ ನಡೆಸಲಾಗಿದೆ. ನಮಗೆ ದೊರೆತ ಮಾಹಿತಿ ಪ್ರಕಾರ142 ಮಂದಿ ಕೋವಿಡ್ ನಿಂದ ಮೃತಪಟ್ಟಿರುವುದಾಗಿ ಮಾಹಿತಿ ದೊರೆತಿದ್ದು, ಪ್ರತಿಯೊಂದು ಕುಟುಂಭಕ್ಕೂ ಪರಿಹಾರ ವಿತರಣೆ ಮಾಡಲಾಗುವುದು ಎಂದು ಬಿ.ಆರ್. ಪ್ರಕಾಶ್ ತಿಳಿಸಿದರು.


ಸಂಘದ ಪ್ರಧಾನ ಕಾರ್ಯದರ್ಶಿ ವಿ. ದೀಪಕ್ ಮಾತನಾಡಿ, ಕೋವಿಡ್ ಸಂಕಷ್ಟ ಮತ್ತು ಎರಡು ಬಾರಿ ವಿಧಿಸಿದ್ದ ಲಾಕ್ ಡೌನ್ ನಿಂದ ಸಮುದಾಯ ತೊಂದರೆಗೆ ಒಳಗಾಗಿದೆ. ಇದೀಗ ಮೂರನೇ ಅಲೆ ಭೀತಿ ಸಹ ಅವರಿಸಿದೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಪ್ರತಿಯೊಂದು ಜಿಲ್ಲೆಗಳಿಗೆ ತೆರಳಿ ಮೃತಪಟ್ಟ ಕುಟುಂಬದವರನ್ನು ಭೇಟಿ ಮಾಡಿ ಆರ್ಥಿಕ ನೆರವು ನೀಡಿ ಸಾಂತ್ವಾನ ಹೇಳಲು ನಿರ್ಧರಿಸಲಾಗಿದೆ ಎಂದರು.


ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ರಾಜು ತಲ್ಲೂರು, ಸಮುದಾಯದ ಹಿರಿಯ ಮುಖಂಡ ಬಿ. ರಂಗಸ್ವಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.

Join Whatsapp