ಉಡುಪಿ: ಉಡುಪಿ, ಮಂಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಪಡಿತರ ಮೂಲಕ ಕುಚಲಕ್ಕಿ ವಿತರಣೆ ಆರಂಭಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕಾಪುವಿನಲ್ಲಿ ಸೋಮವಾರ ನಡೆದ ಜನ ಸಂಕಲ್ಪ ಸಮಾವೇಶದಲ್ಲಿ ಅವರು ಈ ವಿಷಯ ತಿಳಿಸಿದರು.
ಈಗ ನೀಡುತ್ತಿರುವ ಪಡಿತರ ಅಕ್ಕಿ ಸಾರ್ವಜನಿಕರಿಗೆ ಉಪಯೋಗಕ್ಕೆ ಬರುತ್ತಿಲ್ಲವೆಂಬ ಹಿನ್ನೆಲೆಯಲ್ಲಿ ಪಡಿತರ ವ್ಯವಸ್ಥೆಗೆ ಕುಚಲಕ್ಕಿ ನೀಡುವ ವ್ಯವಸ್ಥೆ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿಗಳು ಹೇಳುತ್ತಲೇ ವೇದಿಕೆಯಲ್ಲಿ ಎದ್ದು ನಿಂತು ಮುಖ್ಯಮಂತ್ರಿಗಳಿಗೆ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಧನ್ಯವಾದ ಸಲ್ಲಿಸಿದರು.
ಸುಮಾರು ಪ್ರತಿ ಪಡಿತರ ಚೀಟಿದಾರರಿಗೆ ಕುಚ್ಚಲಕ್ಕಿ ವಿತರಣೆ ಮಾಡುವಾಗ ಸುಮಾರು 152 ಕೋಟಿ ರೂಪಾಯಿ ಸರ್ಕಾರಕ್ಕೆ ವಿಶೇಷ ಖರ್ಚು ಬರಲಿದ್ದು ಸಚಿವ ಕೋಟಾರವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಅನೇಕ ಸಭೆಗಳು ನಡೆದಿದ್ದವು. ಇದೀಗ ಮುಖ್ಯಮಂತ್ರಿಗಳ ಘೋಷಣೆಯೊಂದಿಗೆ ಪಡಿತರದಲ್ಲಿ ಕುಚಲಕ್ಕಿ ವಿತರಣೆ ಜಾರಿಗೆ ಬಂದಂತಾಗಿದೆ.
ಕಾಂಗ್ರೆಸ್ ನವರಿಂದ ವಕ್ಫ್ ಜಾಗ ಕಬಳಿಕೆ
ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಇಂದು ಜನಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಬೊಮ್ಮಾಯಿ, ವಕ್ಫ್ ಜಾಗ ಕಬಳಿಸಿದವರು ಕಾಂಗ್ರೆಸ್ ಪಕ್ಷದವರು ಎಂದು ಟೀಕಿಸಿದರು. ಒಡೆದು ಆಳುವ ನೀತಿ ಕಾಂಗ್ರೆಸ್ಸಿಗರದು. ಕಾಂಗ್ರೆಸ್ ಪಕ್ಷದವರಿಗೆ ಕರ್ನಾಟಕದ ಜನರಿಗೆ ಮುಖ ತೋರಿಸುವ ನೈತಿಕತೆ ಇಲ್ಲ ಎಂದು ಆಕ್ಷೇಪಿಸಿದರು.
ಹಾಸ್ಟೆಲ್ ಕಟ್ಟಡ ವಿಚಾರದಲ್ಲಿ ಭ್ರಷ್ಟಾಚಾರ, ಅನ್ನ ಭಾಗ್ಯದಲ್ಲಿ ಕನ್ನ, ಬಿಡಿಎ, ಭೂಮಿ, ನೀರಾವರಿ ಯೋಜನೆಗಳಲ್ಲಿ ಭ್ರಷ್ಟಾಚಾರ ಮಾಡಿದವರು ಕಾಂಗ್ರೆಸ್ಸಿಗರು ಎಂದ ಅವರು, ಎಸ್ ಸಿ- ಎಸ್ ಟಿ ಮೀಸಲಾತಿ ವಿಚಾರದಲ್ಲಿ ನಮಗೆ ಧೈರ್ಯ ಇತ್ತು. ಆದರೆ, ಕಾಂಗ್ರೆಸ್ಗೆಂ ಆ ಧಮ್ ಇರಲಿಲ್ಲ ಎಂದು ಟೀಕಿಸಿದರು.
ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಡಬಲ್ ಎಂಜಿನ್ ಸರಕಾರ ಕೆಲಸ ಮಾಡುತ್ತಿದೆ. ಇದನ್ನು ಗಮನಿಸಿ ಬಿಜೆಪಿ ಸರಕಾರಕ್ಕೆ ನಿಮ್ಮ ಬೆಂಬಲ ಇರಲಿ ಎಂದು ಮನವಿ ಮಾಡಿದರು.
5 ಬಿಲಿಯನ್ ಡಾಲರ್ ಆರ್ಥಿಕತೆಯ ಚಿಂತನೆಗೆ 1 ಬಿಲಿಯನ್ ಡಾಲರ್ ಕೊಡುಗೆಯನ್ನು ನೀಡಲು ಕರ್ನಾಟಕವು ಸಂಕಲ್ಪ ಮಾಡಿದೆ. ಅನೇಕ ಕೈಗಾರಿಕೆಗಳು ಕರಾವಳಿಯಲ್ಲಿ ಹೂಡಿಕೆ ಮಾಡಲಿವೆ. ಕರ್ನಾಟಕದ ಅಭಿವೃದ್ಧಿಗೆ ಕರಾವಳಿಯ ಕೊಡುಗೆ ಮಹತ್ವದ್ದಾಗಲಿದೆ ಎಂದು ತಿಳಿಸಿದರು.
ರೈತರ ಪಂಪ್ಸೆಿಟ್ಗಿಳಿಗೆ ಉಚಿತ ವಿದ್ಯುತ್, 4 ಸಾವಿರ ಹೆಚ್ಚುವರಿ ಹಣವನ್ನು ಕಿಸಾನ್ ಸಮ್ಮಾನ್ ಯೋಜನೆಯಡಿ ನೀಡಿರುವುದು, ರೈತ ವಿದ್ಯಾನಿಧಿ ಯೋಜನೆ ಜಾರಿಯನ್ನು ಉಲ್ಲೇಖಿಸಿದ ಅವರು, ವಿದ್ಯಾನಿಧಿಯನ್ನು ಮೀನುಗಾರರ ಮಕ್ಕಳಿಗೂ ಕೊಡಲಾಗುತ್ತಿದೆ ಎಂದರು.
ಜನರ ಸಂಕಷ್ಟ ನಿವಾರಿಸಲು ನಾವು ಶ್ರಮಿಸುತ್ತಿದ್ದೇವೆ. ಮೀನುಗಾರರಿಗೆ 5 ಸಾವಿರ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು. ಮೀನುಗಾರರಿಗೆ ಹೆಚ್ಚುವರಿ ಕೆರೋಸಿನ್ ನೀಡಲು ಬದ್ಧವಿದ್ದೇವೆ ಎಂದು ತಿಳಿಸಿದರು. ಪಡಿತರ ಮೂಲಕ ಕುಚ್ಚಲಕ್ಕಿ ವಿತರಿಸಲಿದ್ದೇವೆ ಎಂದು ತಿಳಿಸಿದರು.
ಈ ಭಾಗದ 8 ಮೀನುಗಾರರ ಬಂದರು ಅಭಿವೃದ್ಧಿಗೆ ಹೆಚ್ಚುವರಿ ಹಣ ಕೊಡಲಾಗಿದೆ. ಕೆಲಸ ಶೀಘ್ರವೇ ನಡೆಯಲಿದೆ. 100 ಹೈಸ್ಪೀಡ್ ಬೋಟ್ ಮಂಜೂರು ಮಾಡಿದ್ದೇವೆ. ಇದೇ ವರ್ಷ ಮಂಜೂರಾತಿ ಸಿಗಲಿದ್ದು, 40 ಶೇಕಡಾ ಸಬ್ಸಿಡಿಯೂ ಸಿಗಲಿದೆ ಎಂದು ವಿವರಿಸಿದರು.
ಸಾಗರ್ ಮಾಲಾ ಯೋಜನೆಗಳ ಮೂಲಕ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ಸಿಆರ್ ಝಡ್ ನಿಯಮಾವಳಿಯಲ್ಲಿ ಬದಲಾವಣೆಗೆ ಬೇಡಿಕೆ ಇದ್ದುದನ್ನು ಅನುಮತಿ ಕೊಟ್ಟಿದ್ದಾರೆ. 3 ದಶಕಗಳ ಬೇಡಿಕೆ ಇದಾಗಿತ್ತು. ಕಡಲ ತೀರದ ಆರ್ಥಿಕತೆಗೆ ಇದು ವೇಗ ಕೊಡಲಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಸೇರಿ ಎಲ್ಲ ಕ್ಷೇತ್ರಗಳಲ್ಲಿ ದೂರದೃಷ್ಟಿ ಇರುವ ಕಾರ್ಯಕ್ರಮಗಳನ್ನು ಮೋದಿಜಿ ನೀಡಿದ್ದಾರೆ. ಕೊಂಕಣ ರೈಲ್ವೆ ವಿದ್ಯುದೀಕರಣಕ್ಕೆ ಬಿಜೆಪಿ ಕಾರಣ. ಗತಿ ಶಕ್ತಿ ಯೋಜನೆ ಮೂಲಕ ಬಂದರುಗಳನ್ನು ಮುಖ್ಯ ನಗರಗಳಿಗೆ ಜೋಡಿಸುವ ಕಾರ್ಯ ನಡೆದಿದೆ ಎಂದು ವಿವರಿಸಿದರು. 2 ತಿಂಗಳಿಗೊಮ್ಮೆ ಅದರ ಪ್ರಗತಿಯನ್ನು ಪ್ರಧಾನಿಯವರೇ ಪರಿಶೀಲಿಸುತ್ತಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಉಸ್ತುವಾರಿ ಸಚಿವ ಎಸ್. ಅಂಗಾರ, ರಾಜ್ಯದ ಸಚಿವರಾದ ಗೋವಿಂದ ಕಾರಜೋಳ, ಕೋಟ ಶ್ರೀನಿವಾಸ ಪೂಜಾರಿ, ವಿ. ಸುನೀಲ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್, ಜಿಲ್ಲಾ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಉಡುಪಿ ಶಾಸಕ ರಘುಪತಿ ಭಟ್, ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾ,ಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಂಡಲ ಅಧ್ಯಕ್ಷ ಶ್ರೀಕಾಂತ್ ನಾಯಕ್ ಅವರು ಉಪಸ್ಥಿತರಿದ್ದರು.