ಪಾಕಿಸ್ತಾನದ ಸಂಸತ್ತು ವಿಸರ್ಜನೆ : ಸಾರ್ವತ್ರಿಕ ಚುನಾವಣೆಗೆ ಸಜ್ಜು

Prasthutha|

ಇಸ್ಲಾಮಾಬಾದ್: ರಾಷ್ಟ್ರೀಯ ಪ್ರಕ್ಷುಬ್ಧತೆ ಹಾಗೂ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಪಾಕಿಸ್ತಾನದಲ್ಲಿ ಪ್ರಧಾನಿ ಶೆಹಬಾಜ್ ಷರೀಫ್ ಶಿಫಾರಸಿನ ಮೇರೆಗೆ ಸಂಸತ್ತನ್ನು ಬುಧವಾರ ತಡರಾತ್ರಿ ವಿಸರ್ಜಿಸಲಾಗಿದೆ. ಇದೀಗ ಸಾರ್ವತ್ರಿಕ ಚುನಾವಣೆಗೆ ವೇದಿಗೆ ಸಜ್ಜಾಗಿದೆ.

- Advertisement -

ಪಾಕ್ ಸಂಸತ್ತಿನ 5 ವರ್ಷಗಳ ಅವಧಿ ಪೂರ್ಣಗೊಳ್ಳಲು 3 ದಿನಗಳ ಮುಂಚಿತವಾಗಿ ಅದನ್ನು ವಿಸರ್ಜಿಸಲಾಗಿದೆ. ಆಗಸ್ಟ್ 12 ಸಂಸತ್ತಿನ ಅವಧಿ ಮುಕ್ತಾಯಗೊಳ್ಳುವ ದಿನವಾಗಿತ್ತು. ಪಾಕಿಸ್ತಾನದ ಸಂವಿಧಾನದ ಪ್ರಕಾರ ಸರ್ಕಾರದ ಅವಧಿ ಪೂರೈಸಿದ 60 ದಿನಗಳಲ್ಲಿ ಚುನಾವಣೆ ನಡೆಯಬೇಕು. ಅವಧಿಗೂ ಮುನ್ನ ವಿಸರ್ಜನೆ ಮಾಡಿದರೆ 90 ದಿನಗಳ ಕಾಲಾವಕಾಶ ಇರಲಿದೆ. ಇದೀಗ ಸಂಸತ್ತನ್ನು ಅವಧಿ ಪೂರ್ಣಗೊಳ್ಳುವ ಮೊದಲೇ ವಿಸರ್ಜನೆ ಮಾಡಿರುವುದರಿಂದ ಹೊಸ ಚುನಾವಣೆ ನಡೆಸಲು 90 ದಿನಗಳ ಕಾಲಾವಕಾಶ ಸಿಗಲಿದೆ.

ಸಂಸತ್ತನ್ನು ವಿಸರ್ಜಿಸುವಂತೆ ನಾನು ಇಂದು ರಾತ್ರಿ ಅಧ್ಯಕ್ಷರಿಗೆ ಸಲಹೆ ನೀಡುತ್ತೇನೆ ಎಂದು ಷರೀಫ್ ಈ ಹಿಂದೆ ಸಂಸತ್ತಿಗೆ ತಿಳಿಸಿದ್ದರು. ಹಂಗಾಮಿ ಪ್ರಧಾನಿಯಾಗಿ ನಾಮನಿರ್ದೇಶನ ಮಾಡಲು ಎರಡೂ ಕಡೆಯಿಂದ ಶಿಫಾರಸು ಮಾಡಲಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಗುರುವಾರ ವಿರೊಧ ಪಕ್ಷಗಳ ನಾಯಕರೊಂದಿಗೆ ಚರ್ಚೆ ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ.

- Advertisement -

ಆದರೆ ಚುನಾವಣಾ ಆಯೋಗ ಹೊಸ ಜನಗಣತಿಯ ಆಧಾರದ ಮೇಲೆ ನೂರಾರು ಕ್ಷೇತ್ರಗಳನ್ನು ಮರುವಿನ್ಯಾಸಗೊಳಿಸಲು ಪ್ರಾರಂಭಿಸುವುದರಿಂದ ಚುನಾವಣೆಗೆ ಇನ್ನಷ್ಟು ತಿಂಗಳು ವಿಳಂಬವಾಗುವ ಸಾಧ್ಯತೆಯಿದೆ.

ಕಳೆದ ಬಾರಿ 2018ರ ಜುಲೈನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕ್ರಿಕೆಟಿಗ ಹಾಗೂ ರಾಜಕಾರಣಿ ಇಮ್ರಾನ್ ಖಾನ್ ಪಕ್ಷ ಗೆದ್ದಿತ್ತು. ಅವರು ಬಳಿಕ ಮೊದಲ ಬಾರಿಗೆ ಪಾಕಿಸ್ತಾನದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಕಳೆದ ವರ್ಷ ಅವಿಶ್ವಾಸ ನಿರ್ಣಯದಲ್ಲಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿದರು. ಅಂದಿನಿಂದ ಭ್ರಷ್ಟಾಚಾರ ಪ್ರಕರಣದಲ್ಲಿ ಅಪರಾಧಿಯಾಗಿರುವ ಅವರು ಜೈಲುಪಾಲಾಗಿದ್ದಾರೆ. ಇಮ್ರಾನ್ ಖಾನ್ 5 ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಲಾಗಿದೆ.

Join Whatsapp