ಸುಪ್ರೀಂ ಕೋರ್ಟ್ ಔಷಧದ ಗುಣಮಟ್ಟದ ವಿಚಾರದಲ್ಲಿ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಪತಂಜಲಿ ಔಷಧದ ಗುಣಮಟ್ಟದ ಪರೀಕ್ಷೆಗೆ ರಾಜ್ಯ ಸರಕಾರ ಸೂಚನೆ ನೀಡಿದ್ದನ್ನು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ವಿರೋಧಿಸಿದ್ದಾರೆ. ಪತಂಜಲಿ ಪರ ಬ್ಯಾಟ್ ಬೀಸಿದ ಆರ್ ಅಶೋಕ್ ಸರಕಾರದ ನಡೆಗೆ ಕಿಡಿಕಾರಿದ್ದಾರೆ.
Xನಲ್ಲಿ ಪೋಸ್ಟ್ ಮಾಡಿರುವ ಅಶೋಕ್, ಸಮಸ್ತ ಭಾರತೀಯರ ಅಚ್ಚುಮೆಚ್ಚಿನ ಬ್ರ್ಯಾಂಡ್ ಆಗಿ ಬೆಳೆಯುತ್ತಿರುವ ಬಾಬಾ ರಾಮದೇವ್ ಅವರ ಪತಂಜಲಿ ಮೇಲೆ ಈಗ ಕಾಂಗ್ರೆಸ್ ಸರ್ಕಾರದ ವಕ್ರದೃಷ್ಟಿ ಬಿದ್ದಿದೆ. ದಿನೇಶ್ ಗುಂಡೂರಾವ್ ಅವರೇ ಪತಂಜಲಿ ಉತ್ಪನ್ನಗಳ ಮೇಲೆ ನಿಮಗೇಕಿಷ್ಟು ದ್ವೇಷ ಎಂದು ಪ್ರಶ್ನಿಸಿದ್ದಾರೆ.
ಈ ಹಲಾಲ್ ಕಟ್ ಕಾಂಗ್ರೆಸ್ ಸರ್ಕಾರ ಹಿಂದೂಗಳು, ಹಿಂದೂಗಳ ಸಂಸ್ಥೆಗಳು, ಬಿಸಿನೆಸ್ ಗಳು ಬೆಳೆದರೆ ಸಹಿಸೋದೇ ಇಲ್ಲ. ಪತಂಜಲಿ ಹಲಾಲ್ ಅಲ್ಲ ಅಂತಲೇ? ಪತಂಜಲಿ ಕೇಸರಿ ಬಟ್ಟೆ ತೊಡುವ ಯೋಗಗುರು ಬಾಬಾ ರಾಮ್ ದೇವ್ ಅವರದ್ದು ಅಂತಲೇ? ಪತಂಜಲಿ ಆತ್ಮನಿರ್ಭರ ಭಾರತದ ಪ್ರತೀಕ ಅಂತಲೇ? ಈ ದ್ವೇಷ ರಾಜಕಾರಣವೇ ಕಾಂಗ್ರೆಸ್ ಪಕ್ಷವನ್ನ ಸುಡಲಿದೆ. ಈ ನಿಮ್ಮ ಹಲಾಲ್ ಮಮಕಾರವೇ ನಿಮ್ಮನ್ನ ನಾಶ ಮಾಡಲಿದೆ ಎಂದು ವಿಚಾರಕ್ಕೆ ಭಾವನಾತ್ಮಕತೆಯ ಬಣ್ಣ ನೀಡಿದ್ದಾರೆ.
ಸುಪ್ರೀಂ ಕೋರ್ಟ್ ಪತಂಜಲಿ ಸಂಸ್ಥೆ ವಿರುದ್ಧ ಗಂಭೀರವಾಗಿ ಮಾತನಾಡಿದ್ದು, ಜನರ ಆರೋಗ್ಯದ ದೃಷ್ಟಿಯಿಂದ ರಾಜ್ಯದಲ್ಲಿ ಪತಂಜಲಿ ಔಷಧದ ಗುಣಮಟ್ಟದ ಪರೀಕ್ಷೆ ಮಾಡಲು ಸೂಚಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ಬೆಂಗಳೂರಿನಲ್ಲಿ ಗುರುವಾರ ತಿಳಿಸಿದ್ದರು.