ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಉದ್ಯೋಗಿಗಳಿಗೆ ಸಂಬಳದ ಹೊರತಾಗಿ ನೀಡಬೇಕಾದ ಅಪಾಯ ಭತ್ಯೆಯನ್ನು ಸರಕಾರ ಇದುವರೆಗೂ ನೀಡದೇ ಇರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಕೋವಿಡ್ ಮೊದಲ ಮತ್ತು ಎರಡನೇ ಅಲೆಯಲ್ಲಿ 23 ತಜ್ಞರು, 289 ವೈದ್ಯಾಧಿಕಾರಿಗಳು, 1,615 ಶೂಶ್ರೂಷಕರು, 1151 ಪ್ರಯೋಗ ಶಾಲಾ ತಂತ್ರಜ್ಞರು, 490 ಫಾರ್ಮಾಸಿಸ್ಟ್, 1967 ಗ್ರೂಪ್ ‘ಡಿ’ , 319 ಕಿರಿಯ ಆರೋಗ್ಯ ಸಹಾಯಕರು, 510 ಡಾಟಾ ಎಂಟ್ರಿ ಆಪರೇಟರ್, 40 ನಾನ್ ಕ್ಲಿನಿಕಲ್ ಸಿಬ್ಬಂದಿಗಳೂ ಸೇರಿದಂತೆ ಒಟ್ಟು 6,463 ಸಿಬ್ಬಂದಿಯನ್ನು ಸರಕಾರವು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿತ್ತು. ಉತ್ತಮ ಕೆಲಸ ಮಾಡಿದ್ದಕ್ಕೆ ಸರಕಾರ ಸಂಬಳದ ಹೊರತಾಗಿ 6 ತಿಂಗಳ ಅವಧಿಗೆ ಅಪಾಯ ಭತ್ಯೆ ನೀಡುವುದಾಗಿ ಘೋಷಿಸಿತ್ತು. ಆದರೆ, ಇದುವರೆಗೂ ನಯಾ ಪೈಸೆ ಸಂದಾಯವಾಗಿಲ್ಲ ಎಂದು ತಿಳಿದು ಬಂದಿದೆ.
ವೈದ್ಯರಿಗೆ ಪ್ರತಿ ತಿಂಗಳು 10 ಸಾವಿರ, ಶುಶ್ರೂಷಕರು ಮತ್ತು ಪ್ರಯೋಗ ಶಾಲಾ ತಂತ್ರಜ್ಞರಿಗೆ 5 ಸಾವಿರ (ಶುಶ್ರೂಷಕರಿಗೆ ಎರಡನೇ ಅಲೆಯಲ್ಲಿ 8 ಸಾವಿರ), ಪಿಪಿಇ ಕಿಟ್ ಧರಿಸದೇ ಕೋವಿಡ್ ಆಸ್ಪತ್ರೆಗಳ ಹೊರಗಡೆ ಕೆಲಸ ಮಾಡುವ ಗ್ರೂಪ್ ‘ಡಿ’ ನೌಕರರಿಗೆ 3 ಸಾವಿರ ರೂ. ನೀಡುವುದಾಗಿ ಸರಕಾರ ಆದೇಶ ಹೊರಡಿಸಿತ್ತು.
ಮೊದಲ ಅಲೆಯಲ್ಲಿನ ಆರು ತಿಂಗಳು, ಎರಡನೇ ಅಲೆಯಲ್ಲಿನ ಆರು ತಿಂಗಳು ಸೇರಿ ಒಟ್ಟು 12 ತಿಂಗಳ ಭತ್ಯೆಯನ್ನು ಸರಕಾರ ನೀಡಬೇಕಿದ್ದು, ಒಬ್ಬ ಶುಶ್ರೂಷಕರಿಗೆ 78 ಸಾವಿರ, ತಜ್ಞ ವೈದ್ಯರಿಗೆ 1.20 ಲಕ್ಷ ರೂ. ಭತ್ಯೆಯನ್ನು ಸರಕಾರ ಪಾವತಿಸಬೇಕಿದೆ. ಆದರೆ ಇದೇ ವರ್ಷ ಮಾ.31ರಂದು ಈ ಎಲ್ಲಾ ಸಿಬ್ಬಂದಿಯನ್ನು ಕೆಲಸದಿಂದ ಬಿಡುಗಡೆ ಮಾಡಲಾಗಿದ್ದು, ಇದೀಗ ಕೆಲಸ ಇಲ್ಲದೆ ಸಂಬಳವೂ ಇಲ್ಲ. ಅಪಾಯ ಭತ್ಯೆಯೂ ಇಲ್ಲದೆ ಸಿಬ್ಬಂದಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ.