ದಿಶಾ ಸಾಲ್ಯಾನ್ ಅನುಮಾನಾಸ್ಪದ ಸಾವು: ಕೇಂದ್ರ ಬಿಜೆಪಿ ಸಚಿವನಿಗೆ ಸಮನ್ಸ್!

Prasthutha|

ಮುಂಬೈ: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲ್ಯಾನ್ ಎಂಬಾಕೆಯ ಅನುಮಾನಾಸ್ಪದ ಸಾವಿನ ಕುರಿತು ಸುಳ್ಳು ಸುದ್ದಿ ಹರಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ, ಪುತ್ರನಿಗೆ ಮಾಲ್ವಾನಿ ಪೊಲೀಸರು ಸಮನ್ಸ್ ಜಾರಿಗೊಳಿಸಿದ್ದಾರೆ.

- Advertisement -

ದಿಶಾ ಸಾಲ್ಯಾನ್ ಅವರ ಅನುಮಾನಾಸ್ಪದ ಸಾವಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ನಾರಾಯಣ ರಾಣೆ ಮತ್ತು ಪುತ್ರ, ಬಿಜೆಪಿ ಶಾಸಕ ನಿತೇಶ್ ರಾಣೆ ಎಂಬವರನ್ನು ಕ್ರಮವಾಗಿ ಮಾರ್ಚ್ 4ರಂದು ಬೆಳಿಗ್ಗೆ 11 ಗಂಟೆಗೆ ಮತ್ತು ಮಾರ್ಚ್ 3 ರಂದು ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಬರುವಂತೆ ಮಾಲ್ವಾನಿ ಪೊಲೀಸರು ಸಮನ್ಸ್ ಜಾರಿಗೊಳಿಸಿದ್ದಾರೆ.

ದಿಶಾ ಸಾಲ್ಯಾನ್ ಸಾವಿನ ಕುರಿತು ಸುಳ್ಳು ಸುದ್ದಿ ಹರಡಿದ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ನಾರಾಯಣ ರಾಣೆ ಮತ್ತು ಪುತ್ರ, ಶಾಸಕ ನಿತೇಶ್ ವಿರುದ್ಧ ಆಕೆಯ ತಾಯಿ ನೀಡಿದ್ದ ದೂರಿನನ್ವಯ ಐಪಿಸಿ ಸೆಕ್ಷನ್ 500, 509 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

- Advertisement -

ದಿಶಾ ಸಾಲ್ಯಾನ್ ಸಾವಿನ ಕುರಿತು ಸುಳ್ಳು ಸುದ್ದಿ ಹರಡುತ್ತಿರುವ ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಕೋರಿ ಮಹಾರಾಷ್ಟ್ರ ರಾಜ್ಯ ಮಹಿಳಾ ಅಧ್ಯಕ್ಷೆ ರೂಪಾಲಿ ಚಕಂದರ್ ಪೊಲೀಸರಿಗೆ ಸೂಚಿಸಿದ ಬೆನ್ನಲ್ಲೇ ರಾಣೆ, ಪುತ್ರ ನಿತೇಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ರೂಪಾಲಿ ಅವರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದರು.

ಈ ಮಧ್ಯೆ ದಿಶಾ ಸಾಲ್ಯಾನ್ ಎಂಬಾಕೆಯ ಅನುಮಾನಾಸ್ಪದ ಸಾವಿನ ಕುರಿತು ಸೂಕ್ತ ತನಿಖೆ ನಡೆಸುವಂತೆ ಮತ್ತು ಆರೋಪಿಗಳ ಪಾತ್ರವನ್ನು ಬಹಿರಂಗಪಡಿಸುವಂತೆ ಕೋರಿ ಆಕೆಯ ಪೋಷಕರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು.

ಈ ಸಂಬಂಧ ವಿಚಾರಣೆಗೆ ಆಗಮಿಸುವಂತೆ ಕೇಂದ್ರ ಸಚಿವ ನಾರಾಯಣ ರಾಣೆ ಮತ್ತು ಪ್ರತ್ರ ನಿತೇಶ್ ರಾಣೆ ಎಂಬವರಿಗೆ ನೋಟಿಸ್ ಜಾರಿಗೊಳಿಸಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

Join Whatsapp