ಸಿಎಂ, ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಕುರಿತ ಚರ್ಚೆ: ಖರ್ಗೆ ಭೇಟಿಯಾದ ಡಿಕೆಶಿ

Prasthutha|

ನವದೆಹಲಿ: ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನ, ಹೆಚ್ಚುವರಿ ಡಿಸಿಎಂಗಳ ನೇಮಕ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಚರ್ಚೆಗಳು ಆರಂಭವಾಗಿವೆ. ಈ ಮಧ್ಯೆ ಇಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಜೊತೆಗೆ ರಾಜ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾರೆ. ಈ ಮೂಲಕ ಡಿಸಿಎಂಗಳ ನೇಮಕ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ದೆಹಲಿಗೆ ವರಿಷ್ಠರ ಅಂಗಳ ತಲುಪಿದೆ.

- Advertisement -

ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದ ಡಿ. ಕೆ. ಶಿವಕುಮಾರ್ ದೆಹಲಿಯಲ್ಲಿಯೇ ಉಳಿದಿದ್ದರು.

ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿಯಾಗಿದ್ದರು. ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕೀಯವನ್ನು ಚೆನ್ನಾಗಿ ಬಲ್ಲವರರು. ಆದ್ದರಿಂದ ಉಭಯ ನಾಯಕರ ಬಳಿ ಖರ್ಗೆ ಅಭಿಪ್ರಾಯ ಸಂಗ್ರಹಣೆ ಮಾಡಿದ್ದಾರೆ ಎಂಬ ಮಾಹಿತಿ ಇದೆ.

- Advertisement -

ಡಿ. ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರು ಆಗಿದ್ದಾರೆ. ಆದ್ದರಿಂದ ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮದಡಿ ಕೆಪಿಸಿಸಿ ಅಧ್ಯಕ್ಷರನ್ನು ಬದಲಾವಣೆ ಮಾಡಬೇಕು. ಉತ್ತರ ಕರ್ನಾಟಕ ಭಾಗದ ನಾಯಕರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ವಿವಿಧ ಶಾಸಕರು ಬೇಡಿಕೆ ಇಡುತ್ತಿದ್ದಾರೆ.

ಮುಂಬರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಹಿನ್ನಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗು ಕೇಳಿ ಬರುತ್ತಿದೆ. ಆದರೆ ಈ ಚುನಾವಣೆಗಳು ಮುಗಿಯುವ ತನಕ ಅಧ್ಯಕ್ಷರ ಬದಲಾವಣೆ ಬೇಡ ಎಂದು ಡಿ. ಕೆ. ಶಿವಕುಮಾರ್ ಮಲ್ಲಿಕಾರ್ಜುನ ಖರ್ಗೆಗೆ ಮನವರಿಕೆ ಮಾಡಿ ಕೊಟ್ಟಿದ್ದಾರೆ ಎಂಬ ಮಾಹಿತಿ ಹೊರಬಂದಿದೆ.

ಮಾಧ್ಯಮಗಳ ಮೂಲಕ ಹೆಚ್ಚುವರಿ ಡಿಸಿಎಂ ನೇಮಕ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಬಾರದು. ಇಂತಹ ವಿಚಾರಗಳ ಕುರಿತು ಮಾತನಾಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಈಗಾಗಲೇ ಡಿ. ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಇಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಮಾತನಾಡಿ, ಯಾವುದೇ ಬದಲಾವಣೆ ಇದ್ದರೆ ವರಿಷ್ಠರು ವೀಕ್ಷಕರನ್ನು ಕಳಿಸಿ ಅಭಿಪ್ರಾಯ ಸಂಗ್ರಹ ಮಾಡುತ್ತಾರೆ. ಅವರು ಕೊಡುವ ವರದಿಯನ್ನು ಪಡೆದು ಅಗತ್ಯವಿದ್ದರೆ ಬದಲಾವಣೆ ಮಾಡುತ್ತಾರೆ ಎಂದು ಹೇಳಿದ್ದಾರೆ.



Join Whatsapp