ಖಾಸಗಿ ಉದ್ಯಮಗಳಲ್ಲೂ ಕನ್ನಡಿಗರಿಗೆ ಉದ್ಯೋಗ ಖಾತ್ರಿ; ಸಿಎಂ ಜತೆ ಚರ್ಚಿಸಿ ಗೊಂದಲಗಳಿಗೆ ತೆರೆ: ಎಂ ಬಿ ಪಾಟೀಲ

Prasthutha|

ಬೆಂಗಳೂರು: ಖಾಸಗಿ ಉದ್ಯಮಗಳಲ್ಲಿ ಕೂಡ ಕನ್ನಡಿಗರಿಗೆ ಕೆಲವು ಶ್ರೇಣಿಯ ಹುದ್ದೆಗಳನ್ನು ನೂರಕ್ಕೆ ನೂರರಷ್ಟು ಮೀಸಲಿಡಲಾಗುವುದು. ಇದೇ ಸಂದರ್ಭದಲ್ಲಿ ಉದ್ಯಮಗಳ ಹಿತಾಸಕ್ತಿಗಳನ್ನು ಸಹ ಕಾಪಾಡಲಾಗುವುದು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

- Advertisement -

ಬುಧವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಈ ಸಂಬಂಧ ಸರಕಾರವು ವಿಧೇಯಕಕ್ಕೆ ಅನುಮೋದನೆ ನೀಡಿದೆ. ಈ ವಿಚಾರವಾಗಿ ಸದ್ಯದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಐಟಿ-ಬಿಟಿ, ಕಾನೂನು ಮತ್ತು ಕಾರ್ಮಿಕ ಸಚಿವರುಗಳ ಜೊತೆ ಚರ್ಚಿಸಿ, ಗೊಂದಲಗಳಿಗೆ ತೆರೆ ಎಳೆಯಲಾಗುವುದು ಎಂದರು.

ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಲೇಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ತಯಾರಿಕಾ ವಲಯ ಮತ್ತು ಕೈಗಾರಿಕಾ ಕ್ರಾಂತಿಯ ಉಜ್ವಲ ಅವಕಾಶಗಳನ್ನು ನಾವು ಕಳೆದುಕೊಳ್ಳುವಂತಿಲ್ಲ ಎಂದು ಅವರು ಪ್ರತಿಪಾದಿಸಿದರು.

- Advertisement -

ಸ್ಥಳೀಯರ ಹಿತಾಸಕ್ತಿಗಳನ್ನು ಕಾಪಾಡಲು ಸರಕಾರ ಬದ್ಧವಾಗಿದೆ. ಹಾಗೆಯೇ ಉದ್ಯಮ ವಲಯದವರ ಹಿತಾಸಕ್ತಿಗೂ ಧಕ್ಕೆಯಾಗದಂತೆ ನಿಗಾ ವಹಿಸಲಾಗುವುದು. ಈ ಕುರಿತು ಸಂಬಂಧಪಟ್ಟ ಎಲ್ಲರ ಜೊತೆಗೂ ಮಾತುಕತೆ ನಡೆಸಲಾಗುವುದು. ಈ ವಿಷಯದಲ್ಲಿ ಯಾವುದೇ ಆತಂಕ ಬೇಕಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕವು ಪುರೋಗಾಮಿ ರಾಜ್ಯವಾಗಿದೆ. ‘ಗ್ಲೋಬಲ್ ಚೈನಾ ಒನ್’ ನೀತಿಯಿಂದ ಒದಗಿ ಬಂದಿರುವ ಸದವಕಾಶವನ್ನು ನಾವು ಕಳೆದುಕೊಳ್ಳುವಂತಿಲ್ಲ. ಇದು ಶತಮಾನಕ್ಕೊಮ್ಮೆ ಒದಗಿ ಬರುವ ಅವಕಾಶ ಎಂದು ಪಾಟೀಲ ಬಣ್ಣಿಸಿದ್ದಾರೆ.



Join Whatsapp