ಅತಿಥಿ ಶಿಕ್ಷಕರ ಗೌರವಧನವನ್ನು ಶೀಘ್ರ ವಿತರಿಸಿ: ಕ್ಯಾಂಪಸ್ ಫ್ರಂಟ್

Prasthutha|

ಮಂಗಳೂರು: ದ.ಕ ಜಿಲ್ಲೆಯ ಅತಿಥಿ ಶಿಕ್ಷಕರಿಗೆ ಕಳೆದ ನಾಲ್ಕು ತಿಂಗಳಿನಿಂದ ಗೌರವಧನ ನೀಡದೆ ಸತಾಯಿಸುತ್ತಿರುವ ಸರಕಾರದ ಬೇಜವಾಬ್ದಾರಿತನ ಖಂಡನೀಯ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ತಾಜುದ್ದೀನ್ ತಿಳಿಸಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕರ್ನಾಟಕದಲ್ಲಿ 2012ರಿಂದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸಲು ಅತಿಥಿ ಶಿಕ್ಷಕರನ್ನು ನೇಮಿಸಿ ಅವರಿಗೆ ಗೌರವಧನವನ್ನು ನೀಡುತ್ತಾ ಬಂದಿದೆ. ಈ ಹಿಂದೆ ತಿಂಗಳಿಗೆ ಏಳೂವರೆ ಸಾವಿರ ರೂಪಾಯಿ ನೀಡಿದರೆ ಈ ಶೈಕ್ಷಣಿಕ ಸಾಲಿನಲ್ಲಿ ಅದನ್ನು ಹತ್ತು ಸಾವಿರ ರೂ.ಗೆ ಏರಿಸಲಾಗಿದೆ.   ಕರ್ನಾಟಕದಲ್ಲಿ ಸುಮಾರು 30 ಸಾವಿರ ಅತಿಥಿ ಶಿಕ್ಷಕರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರೋಬ್ಬರಿ 750 ವಿವಿಧ ಪದವಿಗಳನ್ನು ಪಡೆದ ಅತಿಥಿ ಶಿಕ್ಷಕರು ದಿನ ನಿತ್ಯ ಮಕ್ಕಳಿಗೆ ಪಾಠ ಮಾಡುವಲ್ಲಿ ನಿರತರಾಗಿದ್ದಾರೆ. ಜಿಲ್ಲೆಯ ಅತಿಥಿ ಶಿಕ್ಷಕರು 2022, ಮೇ 15 ರಿಂದ ಸೇವೆಗೆ ಹಾಜರಾಗಿದ್ದು ನಾಲ್ಕು ತಿಂಗಳು ಸೇವೆ ಸಲ್ಲಿಸಿದ್ದಾರೆ. ಆದರೆ ಈ ವರೆಗೆ ಬಿಡಿಗಾಸನ್ನು ಕೊಡ ಸರ್ಕಾರ ನೀಡದೆ ಈ ಶಿಕ್ಷಕರನ್ನು ಕಂಗಾಲಾಗುವಂತೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಒಂದು ಕಡೆ ಉದ್ಯೋಗದಲ್ಲಿ ಭದ್ರತೆ ಇಲ್ಲ ಇನ್ನೊಂದು ಕಡೆ ಕನಿಷ್ಠ ವೇತನವೂ ಇಲ್ಲ, ಸಿಗಬೇಕಾದ ಅತಿ ಕನಿಷ್ಠ ಗೌರವಧಾನವನ್ನು ಪಡೆಯಬೇಕಾದರೆ ಪ್ರತಿಭಾರಿ ಬೀದಿಗಿಳಿಯಬೇಕಾದ ದುಸ್ಥಿತಿ ಎದುರಾಗಿದೆ. ಆದ್ದರಿಂದ ಸರ್ಕಾರಿ ಶಾಲೆಯಲ್ಲಿ ಗ್ರಾಮೀಣ ಮಕ್ಕಳಿಗೆ ಪಾಠ ಮಾಡುವ ಅತಿಥಿ ಶಿಕ್ಷಕರ ಸಮಸ್ಯೆ ಮತ್ತು ಬಾಕಿ ಇರುವ 4 ತಿಂಗಳ ಗೌರವಧಾನವನ್ನು ಸರ್ಕಾರ, ಸಂಬಂಧಪಟ್ಟ ಇಲಾಖೆ ತಕ್ಷಣ ಗಮನಹರಿಸಿ ಬಿಡುಗಡೆಗೊಳಿಸಬೇಕು. ಮಾತ್ರವಲ್ಲ ಇವರ ಗೌರವಧನವನ್ನು ಪ್ರತಿ ತಿಂಗಳಿನಂತೆ ನೀಡಬೇಕು, ಕನಿಷ್ಠ ವೇತನವನ್ನು ನೀಡಿ ಮುಂದಕ್ಕೆ ಇವರನ್ನು ಖಾಯಂ ಗೊಳಿಸಿ ಉದ್ಯೋಗಕ್ಕೆ ಭದ್ರತೆ ನೀಡಬೇಕು. ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ ಜಿಲ್ಲೆಯ ಎಲ್ಲಾ ಅತಿಥಿ ಶಿಕ್ಷಕರನ್ನು ಮತ್ತು ಜಿಲ್ಲೆಯ ವಿದ್ಯಾರ್ಥಿಗಳನ್ನು ಬೀದಿಗಿಳಿಸಿ ಹೋರಾಟ ಮಾಡಲಾಗುವುದು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ತಾಜುದ್ದೀನ್ ಎಚ್ಚರಿಸಿದ್ದಾರೆ.

- Advertisement -



Join Whatsapp