►ಇನ್ಮುಂದೆ ತಪ್ಪಲಿದೆ ಸುತ್ತು ಬಳಸಿ ಪುಣೆ ಸೇರುವ ಸಂಕಷ್ಟ
ಮಂಗಳೂರು: ಕರಾವಳಿ ಜೊತೆ ವ್ಯಾವಹಾರಿಕ ಸಂಬಂಧ ಹೊಂದಿರುವ ಮಹಾರಾಷ್ಟ್ರದ ಪುಣೆ ನಗರಕ್ಕೆ ಇಂದಿನಿಂದ (ಮಾರ್ಚ್ 28) ನೇರ ವಿಮಾನಯಾನ ಆರಂಭವಾಗಿದೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಸಂಚರಿಸಲಿರುವ ‘ಇಂಡಿಗೋ’ ವಿಮಾನವು ಇಂದಿನಿಂದ ತನ್ನ ನೇರ ಹಾರಾಟವನ್ನು ಆರಂಭಿಸಿದೆ. ಉದ್ಘಾಟನಾ ದಿನವೇ ಉತ್ತಮ ಸ್ಪಂದನೆ ದೊರಕಿದ್ದು, 125 ಮಂದಿ ಪ್ರಯಾಣಿಕರು ಮಂಗಳೂರಿನಿಂದ ಪುಣೆಗೆ ತೆರಳಿದರು.
ಬೆಳಗಿನ ಜಾವ 2.45 ರ ವೇಳೆಗೆ ಹೊರಟ ವಿಮಾನವು ಕೇವಲ 1ಗಂಟೆ 35 ನಿಮಿಷಗಳ ಪ್ರಯಾಣದ ಬಳಿಕ ಮುಂಜಾವ 4.20ರ ಸಮಯಕ್ಕೆ ಪುಣೆಗೆ ಬಂದಿಳಿಯಿತು.
ಈ ದಿನಗಳಲ್ಲಿ ನೇರ ವಿಮಾನಯಾನ: ಭಾನುವಾರ, ಸೋಮವಾರ, ಬುಧವಾರ ಹಾಗೂ ಶುಕ್ರವಾರ ಹೀಗೆ ವಾರದ ನಾಲ್ಕು ದಿನಗಳ ಕಾಲ ಮಂಗಳೂರಿನಿಂದ ಬೆಳಗಿನ ಜಾವ 2.45 ಕ್ಕೆ ಹೊರಡುವ ಇಂಡಿಗೋ ವಿಮಾನವು 4.20 ರ ಸಮಯಕ್ಕೆ ಪುಣೆ ತಲುಪಲಿದೆ. ಬಳಿಕ ವಿಮಾನವು 4.55ಕ್ಕೆ ಪುಣೆಯಿಂದ ಹೊರಟು ಮುಂಜಾನೆ 6.55ರ ಸಮಯಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ತಲುಪಲಿದೆ.
ಇನ್ನು ಭಾನುವಾರ, ಮಂಗಳವಾರ, ಗುರುವಾರ, ಶನಿವಾರ ಈ ನಾಲ್ಕು ದಿನಗಳು ಇಂಡಿಗೋ ವಿಮಾನವು ರಾತ್ರಿ 11.45ರ ವೇಳೆಗೆ ಪುಣೆಯಿಂದ ಹೊರಟು ತಡರಾತ್ರಿ 1.20ಕ್ಕೆ ಮಂಗಳೂರು ತಲುಪಲಿದೆ.
ಪ್ರಯಾಣಿಕರಿಗೆ ತಪ್ಪಿದ ಬವಣೆ: ಮಂಗಳೂರು- ಪುಣೆ ನಡುವಿನ ನೇರ ವಿಮಾನಯಾನ ಆರಂಭದಿಂದಾಗಿ ಪ್ರಯಾಣಿಕರು ಸುತ್ತು ಬಳಸಿ ಮಾಡುತ್ತಿದ್ದ 6ರಿಂದ 8 ಗಂಟೆಗಳ ಪ್ರಯಾಸಕರ ಪಯಣ ತಪ್ಪಿದಂತಾಗಿದೆ. ಅಲ್ಲದೇ, ಸುದೀರ್ಘ ಪಯಣದ ಜೊತೆಗೆ ಟಿಕೆಟ್ ಗಾಗಿ ವ್ಯಯಿಸುತ್ತಿದ್ದ ದುಬಾರಿ ಹಣವೂ ನೇರ ವಿಮಾನಯಾನ ಆರಂಭದಿಂದ ಪ್ರಯಾಣಿಕನ ಪಾಲಿಗೆ ಲಾಭದಾಯಕವಾಗಲಿದೆ. ಈ ಹಿಂದೆ ಬೆಂಗಳೂರು, ಚೆನ್ನೈ ಮುಂತಾದ ವಿಮಾನ ನಿಲ್ದಾಣಗಳಿಗೆ ತೆರಳಿ ಬಳಿಕ ಪುಣೆ ತಲುಪಬೇಕಿತ್ತು.
ಜಲಫಿರಂಗಿ ಸೆಲ್ಯೂಟ್: ಇನ್ನು ತಡರಾತ್ರಿ 1.20ರ ಸಮಯಕ್ಕೆ ಪುಣೆಯಿಂದ ಮಂಗಳೂರಿಗೆ ಆಗಮಿಸಿದ ‘ಇಂಡಿಗೋ’ ವಿಮಾನಕ್ಕೆ ಜಲಫಿರಂಗಿ ಹಾರಿಸಿ ಸೆಲ್ಯೂಟ್ ಮಾಡುವ ಮೂಲಕ ಮಂಗಳೂರಿನಲ್ಲಿ ಸ್ವಾಗತಿಸಲಾಯಿತು. ಮೊದಲ ನೇರ ವಿಮಾನಯಾನದಲ್ಲಿ 82 ಮಂದಿ ಪ್ರಯಾಣಿಕರು ಹಾಗೂ 6 ಸಿಬ್ಬಂದಿಗಳಿದ್ದರು.