ದಿಂಗಾಲೇಶ್ವರ ಸ್ವಾಮಿ ಎರಡು ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ; ಸಚಿವ ಸಿ.ಸಿ ಪಾಟೀಲ್

Prasthutha|

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ 30% ಕಮಿಷನ್ ಬೇಡಿಕೆ ಆರೋಪ ಮಾಡಿರುವ ಗದಗ ಶಿರಹಟ್ಟಿ ಮಠದ ಫಕೀರೇಶ್ವರ ದಿಂಗಾಲೇಶ್ವರ ಸ್ವಾಮೀಜಿಯ ವಿರುದ್ಧ ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್  ಹರಿಹಾಯ್ದಿದ್ದು,  ಸ್ವಾಮೀಜಿ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿದ್ದು, ಎರಡು ಪ್ರಕರಣದಲ್ಲಿ ಜಾಮೀನಿನಲ್ಲಿ ಹೊರಗಿದ್ದಾರೆ ಎಂದು ಟೀಕಿಸಿದ್ದಾರೆ.

- Advertisement -

ಗದಗಿನ ಡಾ. ತೋಂಟದಾರ್ಯ ಸಿದ್ಧಲಿಂಗ ಸ್ವಾಮೀಜಿ ಹುಟ್ಟಿದ ದಿನವನ್ನು ಭಾವೈಕ್ಯತಾ ದಿನ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿರುವುದಕ್ಕೆ ದಿಂಗಾಲೇಶ್ವರ ಸ್ವಾಮೀಜಿ ವಿರೋಧ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿ.ಸಿ ಪಾಟೀಲ್, ‘ತೋಂಟದಾರ್ಯ ಮಠದ ಲಿಂಗೈಕ್ಯ ಜಗದ್ಗುರು ಸಿದ್ದಲಿಂಗ ಶ್ರೀಗಳ ಹುಟ್ಟು ಹಬ್ಬವನ್ನು ಭಾವೈಕ್ಯತೆ ದಿನವಾಗಿ ಸಿಎಂ ಘೋಷಿಸಿದ್ದರು. ತೋಂಟದಾರ್ಯ ಮಠದ ಮೇಲೆ ಜನರಿಗೆ ಇರುವ ಪೂಜ್ಯ ಭಾವನೆ ಗದಗದ ಶಿರಹಟ್ಟಿ ಮಠದ ಮೇಲೆಯೂ ಇದೆ. ಅದು ಭಾವೈಕ್ಯತೆಗೆ ಹೆಸರಾದ ಮಠ. ಅಲ್ಲಿಯ ಮಠದ ದಿಂಗಾಲೇಶ್ವರ ಸ್ವಾಮಿಗಳು ತೋಂಟದಾರ್ಯ ಸ್ವಾಮಿಗಳ ಹುಟ್ಟಿದ ದಿನವನ್ನು ಭಾವೈಕ್ಯತಾ ದಿನವನ್ನಾಗಿ ಆಚರಿಸಲು ವಿರೋಧ ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದರು.

ಆ ಮನುಷ್ಯನಿಗೆ ಏನಾಯಿತೋ ಗೊತ್ತಿಲ್ಲ. ಯದ್ವಾತದ್ವ ಒಬ್ಬ ಸ್ವಾಮೀಜಿ ಬಳಸದಂಥ ಭಾಷೆಯನ್ನು ಸಿಎಂ ಮೇಲೆ ಬಳಸಿದ್ದಾರೆ. ಮಠಾಧೀಶರು ಇರುತ್ತಾರೆ ಹೋಗುತ್ತಾರೆ. ಆದರೆ ಮಠದ ಘನತೆ, ಗಾಂಭೀರ್ಯತೆ ಕಾಪಾಡುವ ಕೆಲಸವನ್ನು ದಿಂಗಾಲೇಶ್ವರ ಸ್ವಾಮಿಗಳು ಮಾಡಬೇಕಿತ್ತು. ಅದು ಮಾಡಿಲ್ಲ ಎಂಬುದು ನೋವಿನ ಸಂಗತಿ. 30% ಕಮಿಷನ್ ಎಂಬ ಆರೋಪ ಮಾಡಿದ್ದಾರೆ. ಒಂದು ಮಠದ ಮಠಾಧೀಶರಾಗಿ ಇನ್ನೊಂದು ಮಠದ ಬಗ್ಗೆ ಈ ರೀತಿ ವಿಷ ಕಾರುವುದು ಎಷ್ಟು ಸರಿ? ಎಂದು ಸಿ.ಸಿ ಪಾಟೀಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ



Join Whatsapp