ಬೆಂಗಳೂರು: ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವ ಮೂಲಕ ಬಡವರಿಗೆ ನೆರವಾಗುತ್ತಿದೆ. ಕುಮಾರಸ್ವಾಮಿ ಅವರು ಸ್ವಲ್ಪ ಇನ್ನೂ ಕಾದು ನೋಡಬೇಕು. ಈಗಲೇ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ಅಗತ್ಯತೆ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಚಿವರು, ಕುಮಾರಸ್ವಾಮಿ ಅವರ ವೈಎಸ್‌ಟಿ ಆರೋಪವನ್ನು ತಳ್ಳಿಹಾಕಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಭ್ರಷ್ಟ ಮುಕ್ತ ಆಡಳಿತವನ್ನು ನೀಡಲು ಹೆಚ್ಚು ಗಮನ ಹರಿಸಿದೆ. ಕುಮಾರಸ್ವಾಮಿ ಹೇಳಿದಂತೆ ಯಾವ ವೈಎಸ್‌ಟಿ ತೆರಿಗೆ ಕೂಡ ಇಲ್ಲ. ಸರ್ಕಾರದ ಕಾರ್ಯಗಳಿಂದ ಲಾಭ ಪಡೆಯುತ್ತಿರುವ ಜನಸಾಮಾನ್ಯರ ಮನಸ್ಸಿನಲ್ಲಿ ಕಾಂಗ್ರೆಸ್ ಆಡಳಿತದ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿದೆ ಎಂದರು.
ಪಾರದರ್ಶಕವಾಗಿ ಗ್ಯಾರಂಟಿಗಳನ್ನು ಸರ್ಕಾರ ಅನುಷ್ಠಾನಕ್ಕೆ ತರುತ್ತಿದೆ. ನೇರವಾಗಿ ದೊಡ್ಡ ಪ್ರಮಾಣದಲ್ಲಿ ಜನರ ಖಾತೆಗೆ ಹಣ ಹಾಕುತ್ತಿದ್ದೇವೆ. ಅದರಲ್ಲಿ ಒಂದು ರೂಪಾಯಿ ಭ್ರಷ್ಟಾಚಾರ ಮಾಡಲು ಸಾಧ್ಯವಿಲ್ಲ. ಹೀಗಿರುವಾಗ ಕುಮಾರಸ್ವಾಮಿ ಅವರಿಗೆ ಸರ್ಕಾರದ ಮೇಲೆ ಟೀಕೆ ಮಾಡಲು ಬೇರೆ ವಿಷಯಗಳಿಲ್ಲ. ಹೇಗಾದರೂ ಮಾಡಿ ಟೀಕೆ ಮಾಡಬೇಕು ಎಂದು ಟೀಕೆ ಮಾಡುತ್ತಿದ್ದಾರೆ. ಇದು ಆಧಾರರಹಿತ ಆರೋಪ ಎಂದು ಗುಂಡೂರಾವ್ ಟೀಕಿಸಿದರು.
ನಾವು ಸ್ಪಷ್ಟವಾದ ಹೆಜ್ಜೆ ಇಡುತ್ತಿದ್ದೇವೆ. ಒಳ್ಳೆಯ ಆಡಳಿತ ಕೊಡುತ್ತೇವೆ. ಜನರಿಗೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಸುಧಾರಣೆ ಆಗುತ್ತಿದೆ. ಉತ್ತಮ ವ್ಯವಸ್ಥೆ ನಿರ್ಮಾಣ ಆಗಿದೆ. ಜನಪರ ಆಡಳಿತ ಕೊಡಲು ಆದ್ಯತೆ ನೀಡುತ್ತಿದ್ದೇವೆ. ಕುಮಾರಸ್ವಾಮಿ ತಾಳ್ಮೆಯಿಂದ ಇದ್ದರೆ ಒಳ್ಳೆಯದು. ನಾವು ಯಾವ ರೀತಿ ಕೆಲಸ ಮಾಡಬೇಕು ಎಂದು ಸ್ವಲ್ಪ ದಿನ ಕಾದು ನೋಡಬೇಕು. ಇಷ್ಟು ಬೇಗ ಅವರು ಎಲ್ಲೋ ಒಂದು ಕಡೆ ಮೈ ಪರಚುವ ಕೆಲಸ ಮಾಡಬಾರದು ಎಂದು ಟೀಕಿಸಿದರು.
ಕೊರೊನಾ ವೇಳೆ ಬಿಜೆಪಿ ಅವಧಿಯಲ್ಲಿನ ಭ್ರಷ್ಟಾಚಾರದ ತನಿಖೆ ಬಗ್ಗೆ ಪ್ರತಿಕ್ರಿಯಿಸುತ್ತಾ, ಆ ಸಂಬಂಧ ಸಾಕಷ್ಟು ಮಾಹಿತಿ ಕಲೆ ಹಾಕಿದ್ದೇವೆ. ಯಾವ ರೀತಿ ತನಿಖೆ ಮಾಡಬೇಕು ಎಂಬ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಸಮಿತಿ ಮಾಡಿ ತನಿಖೆ ಮಾಡಬೇಕೇ ಎಂಬ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ಇದೇ ವೇಳೆ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದರು.