ಮೈಷುಗರ್ ಕಾರ್ಖಾನೆಯ ಬೆಲೆಬಾಳುವ ಯಂತ್ರೋಪಕರಣ ಅಕ್ರಮ ಸಾಗಣೆ: ಕ್ರಮಕ್ಕೆ ದಿನೇಶ್ ಗೂಳಿಗೌಡ ಒತ್ತಾಯ

Prasthutha|

ಮಂಡ್ಯ: ಮೈಷುಗರ್ ಕಾರ್ಖಾನೆಯ ಬೆಲೆಬಾಳುವ ಯಂತ್ರೋಪಕರಣಗಳನ್ನು,  ಅಕ್ರಮ ಸಾಗಣೆ ಮಾಡಿದವರ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನೂತನ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಜಿಲ್ಲಾಧಿಕಾರಿಯವರನ್ನು ಆಗ್ರಹಿಸಿದ್ದಾರೆ.

- Advertisement -

ಈ ಬಗ್ಗೆ ಮಂಡ್ಯ ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ, ಮೈಷುಗರ್ ಕಾರ್ಖಾನೆಯ ಬೆಲೆಬಾಳುವ ಹಲವು ಯಂತ್ರೋಪಕರಣಗಳನ್ನು  ಖಾಸಗಿ ಕಾರ್ಖಾನೆಗೆ ಅಕ್ರಮವಾಗಿ ಸಾಗಣೆ ಮಾಡುತ್ತಿರುವಾಗ ಹೋರಟಗಾರರು ಮತ್ತು ಕನ್ನಡಪರ ಸಂಘಟನೆಯು ಪ್ರಮುಖರು ಖುದ್ದಾಗಿ ತಡೆದು ಪ್ರಕರಣವನ್ನು ಬಯಲಿಗೆಳೆದಿರುವ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈ ಕೃತ್ಯ ಅಕ್ಷಮ್ಯ ಅಪರಾಧವಾಗಿದ್ದು,  ಸರ್ಕಾರಿ ಸ್ವಾಮ್ಯದ ಕಾರ್ಖಾನೆಯ ಬೆಲೆಬಾಳುವ  ಯಂತ್ರೋಪಕರಣಗಳನ್ನು ಕದ್ದು ಸಾಗಿಸಿ ಕಾರ್ಖಾನೆಯ  ಆಸ್ತಿಯನ್ನು ಅಕ್ರಮವಾಗಿ ಲಪಟಾಯಿಸುವ  ಹುನ್ನಾರವಾಗಿದೆ ಎಂದು ತಿಳಿಸಿದ್ದಾರೆ.

ಈ ಕೃತ್ಯದ ಹಿಂದೆ ಮೈಷುಗರ್ ಕಾರ್ಖಾನೆಯಲ್ಲಿ  ನೌಕರರಾಗಿದ್ದವರು ನೇರವಾಗಿ ಶಾಮೀಲಾಗಿ ಯಂತ್ರೋಪಕರಣಗಳನ್ನು ಕದ್ದುಸಾಗಿಸಲು ನೇರವಾದ ಬಗ್ಗೆ ಗುಮಾನಿಗಳಿದ್ದು ಇಂತಹವರು ಹೇಯ ಕೃತ್ಯಗಳಿಂದಲೇ ಮೈಷುಗರ್ ಕಾರ್ಖಾನೆ ಇಂದು ಈ ದುಸ್ತಿಗೆ ಬರಲು ಬಹುಮುಖ್ಯ ಕಾರಣವಾಗಿದೆ.

- Advertisement -

ಮೈಷುಗರ್ ಮಂಡ್ಯ ಜಿಲ್ಲೆಯ ಜೀವನಾಡಿಯಾಗಿದ್ದು, ಮೈಸೂರು ಮಹಾರಾಜರ ದೂರದೃಷ್ಟಿಯ ಫಲವಾಗಿ ಮಂಡ್ಯ ಜಿಲ್ಲೆಯ ಆರ್ಥಿಕ ಹಾಗೂ ಸಾಮಾಜಿಕ ವ್ಯವಸ್ಥೆ ಯ ಸುಧಾರಣೆಗೆ ಬಹುಮುಖ್ಯ ಕಾರಣವಾಗಿ ಲಕ್ಷಾಂತರ ರೈತರಿಗೆ, ಕಾರ್ಮಿಕರಿಗೆ ಬೆಳಕಾಗಿದೆ.   ಅತ್ಯಂತ ದೊಡ್ಡ ಇತಿಹಾಸವಿರುವ ಹಾಗೂ ಸರ್ಕಾರಿ ಸ್ವಾಮ್ಯದ ಏಕೈಕ ಕಾರ್ಖಾನೆಯಾಗಿರುವ ಮೈಷುಗರ್ ಉಳಿವಿಗೆ ಸುದೀರ್ಘ ಹೋರಾಟಗಳು ನಡೆದಿವೆ. ಈ ಕಾರ್ಖಾನೆಯನ್ನು ಖಾಸಗಿಯವರಿಗೆ ಒಪ್ಪಿಸುವ ಪ್ರಯತ್ನಗಳು ಸಹ ನಡೆದಿದ್ದು, ಇದರ ವಿರುದ್ಧ ನಡೆದ ಹೋರಾಟದ ಫಲವಾಗಿ ಇತ್ತಿಚೆಗೆ  ಸರ್ಕಾರದ ವತಿಯಿಂದಲೇ ಕಾರ್ಖಾನೆಯನ್ನು ನಡೆಸುವ ಭರವಸೆಯನ್ನು ಮಾನ್ಯ ಮುಖ್ಯಮಂತ್ರಿಯವರು ನೀಡಿದ್ದಾರೆ. ಆ ಪ್ರಕ್ರಿಯೆಗಳು ಪ್ರಸ್ತುತ ಚಾಲ್ತಿಯಲ್ಲಿದ್ದು ಅಂತಹ ಸಂಧರ್ಬದಲ್ಲಿ ಇಂತಹ ನಾಚಿಕೆಗೇಡಿನ ಸಂಗತಿ ನಡೆದಿರುವುದು ಅಕ್ಷಮ್ಯ ಎಂದು ಅವರು ತಿಳಿಸಿದ್ದಾರೆ.

ಕಳ್ಳತನದಿಂದ  ಕಾರ್ಖಾನೆಯ ಬೆಲೆಬಾಳುವ ಯಂತ್ರೋಪಕರಣಗಳನ್ನು ಕದ್ದು-ಮುಚ್ಚಿ ಸಾಗಿಸುತ್ತಿರುವುದು ಸಾಕ್ಷಿ ಸಮೇತ ಪತ್ತೆ ಆಗಿದ್ದರೂ ಇದುವರೆವಿಗೂ ಕೃತ್ಯ ಎಸಗಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳದಿರುವುದು ಆಶ್ಚರ್ಯಕರವಾಗಿದೆ. ಆದ್ದರಿಂದ ತಾವು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಖುದ್ದು ಕಾರ್ಖಾನೆಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವದರ ಜೊತೆಗೆ ತಕ್ಷಣ  ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾರ್ಖಾನೆಯ ಆಸ್ತಿ ಕಾಪಾಡುವುದರ ಜೊತೆಗೆ  ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Join Whatsapp