ಬೆಂಗಳೂರು: ಯುಗಾದಿ ಹಬ್ಬದ ಪ್ರಯುಕ್ತ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಗಣ್ಯರು ಶುಭಾಶಯ ಕೋರಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯುಗಾದಿ ಸಂದೇಶವನ್ನು ಸಾರಿದ್ದಾರೆ. ‘ದುಃಖದ ಕಹಿಬೇವು, ಸಂತಸದ ಸಿಹಿಬೆಲ್ಲ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿ, ಭರವಸೆಯೊಂದಿಗೆ ಮುನ್ನಡೆಯಬೇಕು ಎನ್ನುವುದೇ ಯುಗಾದಿಯ ಜೀವನ ಸಂದೇಶ. ಯುಗ ಪರಿವರ್ತನೆಯ ಸಂದೇಶದ ಯುಗಾದಿ ಹಬ್ಬ ನಾವೆಲ್ಲ ಬಯಸುವ ಬದಲಾವಣೆಯನ್ನು ಹೊತ್ತು ತರಲಿ. ಸಮಸ್ತ ಜನರ ಬಾಳಲ್ಲಿ ಹೊಸ ಉತ್ಸಾಹ, ಹೊಸ ಚಿಂತನೆ, ಹೊಸ ಭರವಸೆಗಳನ್ನು ತುಂಬಲಿ. ಬೆಲ್ಲದಂತ ಸುಖ-ಸಮೃದ್ಧಿ ಮಾತ್ರವೇ ನಿಮ್ಮೆಲ್ಲರ ಬದುಕಲ್ಲಿ ತುಂಬಿರಲಿ ಎಂದು ಹಾರೈಸುತ್ತೇನೆ. ನಾಡಬಾಂಧವರಿಗೆ ಯುಗಾದಿಯ ಶುಭಾಶಯಗಳು’ ಎಂದು ಹೇಳಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಯಗಳನ್ನು ಕೋರಿದ್ದಾರೆ. ‘ಹೊಸತು ಎಂದರೆ ಸಂಭ್ರಮ. ಹೊಸತು ಎಂದರೆ ಉಲ್ಲಾಸ. ಹೊಸತು ಎಂದರೆ ಉತ್ಸಾಹ, ಹೊಸತು ಎಂದರೆ ಉತ್ಸವ. ಈ ಯುಗಾದಿ ಎಲ್ಲ ಹೊಸತನಕ್ಕೆ ಮುನ್ನುಡಿಯಾಗಲಿ. ಅನ್ನದಾತನ ಬದುಕು ಹಸನಾಗಲಿ, ದುಡಿವ ಕೈಗಳಿಗೆ ಶಕ್ತಿ ತುಂಬಲಿ. ಎಲ್ಲರ ಬದುಕು ನವೀಕರಣಗೊಳ್ಳಲಿ. ನಲಿವು ನಿರಂತರವಾಗಿರಲಿ’ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡ ಜನತೆಗೆ ಕನ್ನಡದಲ್ಲೇ ಶುಭಾಶಯ ಕೋರಿದರು. ‘ಯುಗಾದಿಯ ಹೊಸತನ ಮತ್ತು ನವೀಕರಣದ ಭರವಸೆಯೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಶುಭಾಶಯಗಳು. ಎಲ್ಲರಿಗೂ ಅಪರಿಮಿತ ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿದ ವರ್ಷವನ್ನು ಆಶಿಸುತ್ತೇನೆ. ಈ ಶುಭ ಸಂದರ್ಭವು ಜೀವನದ ಪ್ರತಿಯೊಂದು ವಿಷಯದಲ್ಲೂ ನಿಮಗೆ ಸಂತೋಷವನ್ನು ತರಲಿ’ ಎಂದು ಪ್ರಧಾನಿ ಮೋದಿ ಹಾರೈಸಿದ್ದಾರೆ.