ಬಿಜೆಪಿ ಇರೋವರೆಗೂ ಭಾರತದ ಮೇಲೆ ದಾಳಿ ಸಾಧ್ಯವಿಲ್ಲ ಎಂದು ತಾಲಿಬಾನ್‌ ಕಾರ್ಯದರ್ಶಿ ಹೇಳಿದ್ದಾರೆಯೇ?: ಫ್ಯಾಕ್ಟ್ ಚೆಕ್ ಇಲ್ಲಿದೆ ನೋಡಿ

Prasthutha|

‘ಬಿಜೆಪಿ ಇರುವ ತನಕ ಭಾರತದ ಮೇಲೆ ದಾಳಿ ಮಾಡಲು ಸಾಧ್ಯವಿಲ್ಲ- ತಾಲಿಬಾನ್‌ ಕಾರ್ಯದರ್ಶಿ ಅಲ್‌ ಬೇಡರ್‌ ಇಲ್ಯಾಸಿ. ದೇಶಕ್ಕೆ ಬಿಜೆಪಿ ಎಷ್ಟು ಅವಶ್ಯ ಇದೆ ಎಂದು ಯಾಕೆ ದೇಶದ ಜನರು ಅರ್ಥ ಮಾಡಿಕೊಳ್ಳುತ್ತಿಲ್ಲ. ಅದರಲ್ಲೂ ಹಿಂದೂಗಳು’ ಎಂಬ ಪೋಸ್ಟರ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರೋದು ನೀವು ಗಮನಿಸಿರಬಹುದು. ಆದರೆ,  ಇದು ಸುಳ್ಳು ಸುದ್ದಿ. ಇಂತಹ ಸುಳ್ಳು ಸುದ್ದಿಗಳು ಇತ್ತೀಚೆಗೆ ಹೇರಳವಾಗಿ ಸೃಷ್ಟಿಯಾಗುತ್ತಿದ್ದು, ಅವು ಬಿಜೆಪಿಗೆ ಮತಬ್ಯಾಂಕ್ ಹೆಚ್ಚಿಸುವ ಗುರಿಯನ್ನು ಹೊಂದಿರುತ್ತವೆ. ಅಂತಹ ಫೇಕ್ ಮಾಹಿತಿಗಳಲ್ಲಿ ಇದೂ ಒಂದು. ಆ ಪೋಸ್ಟರ್ ನಲ್ಲಿ ಇರುವ ವ್ಯಕ್ತಿ ಅಲ್‌ ಬೇಡರ್‌ ಇಲ್ಯಾಸಿಯೂ ಅಲ್ಲ, ಅವರು ತಾಲಿಬಾಲ್‌ ಕಾರ್ಯದರ್ಶಿಯೂ ಅಲ್ಲ. ತಾಲಿಬಾನ್ ಕಾರ್ಯದರ್ಶಿ ಭಾರತದ ದಾಳಿ ಬಗ್ಗೆ ಹೇಳಲೂ ಇಲ್ಲ.

- Advertisement -

2021ರಿಂದಲೂ ಇದೇ ಪೋಸ್ಟರ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆಗಿಂದಲೂ ‘ದಿ ಕ್ವಿಂಟ್‌’ ಸೇರಿದಂತೆ ವಿವಿಧ ಮಾಧ್ಯಮಗಳು ಫ್ಯಾಕ್ಟ್‌ಚೆಕ್‌ ಪ್ರಕಟಿಸಿವೆ. ಬೇರೆ ಬೇರೆ ಮಾದರಿಯ ಪೋಸ್ಟರ್‌ಗಳು ಹರಿದಾಡುತ್ತಿವೆ. ಈ ಹಿಂದಿನ ಪೋಸ್ಟರ್‌ನಲ್ಲಿ ‘ಎನ್‌ಬ್ಲೂಎಎ ಸ್ಟುಡಿಯೊ’ ಎಂದು ನಮೂದಾಗಿದೆ. ಯೂಟ್ಯೂಬ್‌ನಲ್ಲಿ ಈ ಚಾನೆಲ್‌ ಅನ್ನು ಹುಡುಕಿದರೆ, 17.5 ನಿಮಿಷದ ವಿಡಿಯೊವೊಂದು ದೊರೆಯುತ್ತದೆ. ಈ ವಿಡಿಯೊದಲ್ಲಿ, ವಿಡಿಯೊವನ್ನು 2019ರ ಮಾರ್ಚ್‌ 1ರಂದು ಚಿತ್ರೀಕರಿಸಲಾಗಿದೆ ಎಂದು ಬರೆದುಕೊಂಡಿದೆ. ಹಾಗೆಯೇ ವಿಡಿಯೊದಲ್ಲಿ ಇರುವವರು ಖಲೀದ್‌ ಮೆಹಮೂದ್‌ ಅಬ್ಬಾಸಿ ಎಂದೂ ಹೇಳಲಾಗಿದೆ.

2021ರಲ್ಲಿ ಕ್ವಿಂಟ್‌ ತನ್ನ ಫ್ಯಾಕ್ಟ್‌ಚೆಕ್‌ ಪ್ರಕಟಿಸುವ ವೇಳೆ ಅಬ್ಬಾಸಿ ಅವರನ್ನು ಸಂಪರ್ಕಿಸಿತ್ತು. ‘ನಾನು ತಾಲಿಬಾನ್‌ಗೆ ಸೇರಿದವನಲ್ಲ. ನಾನೊಬ್ಬ ಮೌಲ್ವಿ’ ಎಂದಿದ್ದರು. ಪೂರ್ಣ ಪ್ರಮಾಣದ ವಿಡಿಯೊವನ್ನು ಕೇಳಿಸಿಕೊಂಡರೂ, ಎಲ್ಲಿಯೂ ಪೋಸ್ಟರ್‌ನಲ್ಲಿ ಇರುವಂತೆ ಅವರು ಬಿಜೆಪಿಯ ಬಗ್ಗೆ ಮಾತನಾಡಿಲ್ಲ. ಭಾರತದಲ್ಲಿ ಮುಸ್ಲಿಮರ ಸ್ಥಿತಿಗತಿ ಕುರಿತು ಮಾತನಾಡಿದ್ದಾರೆ ಮತ್ತು ಬಿಜೆಪಿಯು ಮುಸ್ಲಿಮರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದೇ ಮಾತನಾಡಿದ್ದಾರೆ.

Join Whatsapp