ಧರ್ಮಸ್ಥಳ – ಮಂಗಳೂರು ಪ್ರಯಾಣಿಕರ ಗೋಳು ಕೇಳುವವರಿಲ್ಲ: ಪರದಾಟಕ್ಕೆ ಮುಕ್ತಿ ಯಾವಾಗ?

Prasthutha|

- Advertisement -

✒️ಅಕ್ಬರ್ ಬೆಳ್ತಂಗಡಿ

ಆತ್ಮೀಯರೇ,
ಎಂಬತ್ತು -ತೊಂಬತ್ತರ ದಶಕಗಳಿಂದ ಬದಲಾಗದ ಧರ್ಮಸ್ಥಳ – ಮಂಗಳೂರು ಪ್ರಯಾಣಿಕರ ಗೋಳು ಕೇಳುವವರಿಲ್ಲ. ದಿನಂಪ್ರತಿ ಮಂಗಳೂರು ಉದ್ಯೋಗಕ್ಕೆ ಹೋಗುವ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಕಂಡರೆ ಅಯ್ಯೋ ಅನ್ನಿಸುತ್ತದೆ. ಕಣ್ಣಿದ್ದು ಕುರುಡಾಗಿದ್ದಾರೆ ಧರ್ಮಸ್ಥಳ ಕ.ರಾ.ರ.ಸಾ.ಸಂಸ್ಥೆಯ ಅಧಿಕಾರಿಗಳು. ಬೆಳಿಗ್ಗೆ ಸುಮಾರು 7:30 ರಿಂದ 9:00ರ ವರೆಗೆ ಮಹಿಳೆಯರು ಹಾಗೂ ಪುರುಷರು ಮಂಗಳೂರಿಗೆ ತಮ್ಮ ದಿನನಿತ್ಯದ (ಕೆಲಸ) ಉದ್ಯೋಗಕ್ಕಾಗಿ ಹೊರಟು ಓಡೋಡಿ ಬಂದು ಬಸ್ಸು ನಿಲ್ದಾಣಕ್ಕೆ ಬಂದರೆ, ಬಸ್ಸಿಗೆ ಹತ್ತಿ ನಿಲ್ಲುವುದು ಬಿಡಿ! ಬಸ್ಸನ್ನೇರುವುದಕ್ಕೇ ಸಾಹಸ ಪಡುವ ಪರಿಸ್ಥಿತಿ ಒಮ್ಮೆ ನೋಡಿ. ಬಸ್ ಹತ್ತಿಲ್ಲ ಅಂದ್ರೆ ಉದ್ಯೋಗಕ್ಕೆ ಸಮಯಕ್ಕೆ ಸರಿಯಾಗಿ ತಲುಪಲೂ ಆಗಲ್ಲ. ಇದು ಸುಮಾರು ವರ್ಷಗಳಿಂದ ನಡೆಯುವ ಮತ್ತು ಎಲ್ಲರೂ ತಿಳಿದಂತಹ ವಿಚಾರ. ಆದರೆ ಇದೆಲ್ಲವನ್ನೂ ನೋಡಿ ಕಣ್ಣಿದ್ದು ಕುರುಡರಂತೆ ಸರಕಾರ ನಟಿಸುತ್ತಿದೆ. ಇಲ್ಲಿನ ಜನತೆ ಸಮಸ್ಯೆಗಳನ್ನು ಅವರವರೇ ಮಾತನಾಡಿಕೊಳ್ಳುತ್ತಾರೆಯೇ ಹೊರತು ಪರಿಹಾರಕ್ಕಾಗಿ ಹೋರಾಟ ಮಾಡುವುದು ಅಥವಾ ಅದನ್ನು ಪ್ರಶ್ನಿಸುವ ಮನೋಭಾವವೂ ಬೆಳೆಸಿಕೊಂಡಿಲ್ಲ. ಇದರಿಂದ ಅಧಿಕಾರಿಗಳೂ ತಲೆಕೆಡಿಸಿಕೊಂಡಿಲ್ಲ.

- Advertisement -

ಧರ್ಮಸ್ಥಳದಿಂದ ಬೆಳಿಗ್ಗೆ 6:30, 7:30, 8:30ಕ್ಕೆ ವೇಗ ದೂತ ಬಸ್ಸುಗಳನ್ನು ಬಿಡುತ್ತಾರೆ. ಅದೇ ಬಸ್ಸಿಗಾಗಿ ಮಂಗಳೂರಿಗೆ ಉದ್ಯೋಗಕ್ಕೆ ಹೋಗುವ ಪ್ರಯಾಣಿಕರು ಕಾದು ಕುಳಿತಿರುತ್ತಾರೆ. ಆದ್ರೆ ಅದೇ ಬಸ್ಸಿಗೆ ಗುರುವಾಯನಕೆರೆ, ಮಡಂತ್ಯಾರು, ಪುಂಜಲ್ ಕಟ್ಟೆಯ ವರೆಗೆ ಹೋಗುವ ಪ್ರಯಾಣಿಕರು, ಹಾಗೂ ವಿದ್ಯಾರ್ಥಿಗಳು ಅದೇ ವೇಗ ದೂತ ಬಸ್ಸನ್ನೇರುವುದರಿಂದ ದಿನಂಪ್ರತಿ ಮಂಗಳೂರಿಗೆ ಉದ್ಯೋಗಕ್ಕೆ ಹೋಗುವ ಪುರುಷರು, ಮಹಿಳೆಯರು ಪರದಾಡುವ ಪರಿಸ್ಥಿತಿ ಎದುರಾಗುತ್ತಿದೆ. ಅದಲ್ಲದೇ ದಿನನಿತ್ಯ ಕಂಡಕ್ಟರ್ ಹಾಗೂ ಪ್ರಯಾಣಿಕರ ನಡುವೆ ಜಗಳವೂ ನಡೆಯುತ್ತಿರುತ್ತದೆ.

ಇದೆಲ್ಲದಕ್ಕೂ ಪರಿಹಾರವೆಂಬಂತೆ ಕೂಡಲೇ ಅಧಿಕಾರಿಗಳು ಎಚ್ಚೆತ್ತು ಒಂದು ಬದಲಾವಣೆಯನ್ನು ತಂದು ಪ್ರಯಾಣಿಕರ ಸಮಸ್ಯೆಯನ್ನು ಬಗೆಹರಿಸಬೇಕಾಗಿ ಸಾರ್ವಜನಿಕರ ಪರವಾಗಿ ಕೇಳಿಕೊಳ್ಳುತ್ತಿದ್ದೇನೆ.

ಸದ್ಯಕ್ಕೆ ಸಮಸ್ಯೆ ನಿವಾರಿಸಲು ಒಂದು ಉತ್ತಮ ಕ್ರಮ ಅಧಿಕಾರಿಗಳಿಂದ ನಡೆಯಬೇಕು. ಬೆಳಿಗ್ಗೆ ಧರ್ಮಸ್ಥಳದಿಂದ ಮಂಗಳೂರಿಗೆ ಓಡುವಂತಹ ವೇಗದೂತ ಬಸ್ಸಿಗೆ ಬಿ.ಸಿ.ರೋಡ್ ಮತ್ತು ಮಂಗಳೂರಿಗೆ ಹೋಗುವ ಪ್ರಯಾಣಿಕರನ್ನು ಮಾತ್ರ ಹತ್ತಿಸುವ ಕ್ರಮ ಕೈಗೊಳ್ಳಬೇಕು. ಹೇಗೆಂದರೆ ಧರ್ಮಸ್ಥಳ, ಉಜಿರೆ, ಬೆಳ್ತಂಗಡಿ, ಗುರುವಾಯನಕೆರೆ, ಮಾಡಾಂತ್ಯಾರು ಇಲ್ಲಿನ ಪ್ರಯಾಣಿಕರಲ್ಲಿ ನೇರವಾಗಿ ಬಿಸಿರೋಡ್ ಮತ್ತು ಮಂಗಳೂರಿಗೆ ಹೋಗುವ ಪ್ರಯಾಣಿಕರಿಗೆ ಮಾತ್ರ ಸಂಚರಿಸುವ ಅವಕಾಶ ನೀಡಬೇಕು. ಧರ್ಮಸ್ಥಳದಿಂದ ಹತ್ತಿ ಉಜಿರೆಯಲ್ಲಿ ಇಳಿಯುವ, ಉಜಿರೆಯಿಂದ ಹತ್ತಿ ಗುರುವಾಯನಕೆರೆಯಲ್ಲಿ ಇಳಿಯುವ, ಬೆಳ್ತಂಗಡಿಯಿಂದ ಹತ್ತಿ ಮಡಂತ್ಯಾರಿನಲ್ಲಿ ಇಳಿಯುವ ಪ್ರಯಾಣಿಕರಿಗೆ ಇತರೆ ಬಸ್ಸಿನಲ್ಲಿ ಅವಕಾಶ ಕಲ್ಪಿಸಬೇಕು. ಈ ಕುರಿತು ಅಧಿಕಾರಿಗಳು ಚರ್ಚಿಸಿ ಹೊಸ ಮಾರ್ಗಸೂಚಿ ತಯಾರಿಸಬೇಕು. ಅಥವಾ ಜನರು ಅನುಭವಿಸುವ ಈ ಪ್ರಯಾಣದ ಸಮಸ್ಯೆಗೆ ಯಾವುದಾದರೂ ಒಂದು ಉತ್ತಮ ಪರಿಹಾರ ಮಾರ್ಗ ಅತೀ ಶೀಘ್ರದಲ್ಲಿ ದಯವಿಟ್ಟು ಕಂಡುಕೊಳ್ಳಬೇಕು. ಈ ನನ್ನ ಬೇಡಿಕೆಗೆ ಪತ್ರಕರ್ತರು, ವಿವಿಧ ಸಂಘ ಸಂಸ್ಥೆಗಳು, ಜನ ಪ್ರತಿನಿಧಿಗಳು, ಪೋಲೀಸ್ ಅಧಿಕಾರಿಗಳು, ಜನ ಸಮಾನ್ಯರು ಬೆಂಬಲ ಸೂಚಿಸಬೇಕು ಎಂದು ಕೋರುತ್ತೇನೆ.



Join Whatsapp