ಉತ್ತರ ಪ್ರದೇಶದಲ್ಲಿ 9 ತಿಂಗಳಾದರೂ ಡಿಜಿಪಿ ಹುದ್ದೆ ಖಾಲಿ!

Prasthutha|

ಲಕ್ನೋ: ಕಳೆದ ಒಂಬತ್ತು ತಿಂಗಳುಗಳಿಂದ ಉತ್ತರ ಪ್ರದೇಶದಲ್ಲಿ ಖಾಯಂ ಡಿಜಿಪಿ- ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಇಲ್ಲ. ಜಗತ್ತಿನಲ್ಲೇ ಅತಿ ದೊಡ್ಡದಾದ 3 ಲಕ್ಷ ಸಿಬ್ಬಂದಿಯ ಪೊಲೀಸ್ ಪಡೆ ಈ ರಾಜ್ಯದ್ದಾಗಿದ್ದು, ಆದರೆ ಕಳೆದ 9 ತಿಂಗಳುಗಳಿಂದ ಇಲ್ಲಿ ಹಂಗಾಮಿ ಡಿಜಿಪಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.

- Advertisement -


ಖಾಯಂ ಡಿಜಿಪಿ ನೇಮಕಾತಿಗೆ ಕ್ರಮ ತೆಗೆದುಕೊಳ್ಳದಿರುವುದನ್ನು ಪ್ರತಿ ಪಕ್ಷಗಳು ಸಾಕಷ್ಟು ಬಾರಿ ಪ್ರಶ್ನಿಸಿ ಆಯಿತು. “ಬಿಜೆಪಿಯು ಅಪರಾಧ ಕೃತ್ಯ ತಡೆಯುವುದು ಹೋಗಲಿ, ಅದಕ್ಕೆ ಖಾಯಂ ಡಿಜಿಪಿ ನೇಮಕ ಮಾಡಲೂ ಆಗುತ್ತಿಲ್ಲ” ಎಂದು ಪ್ರತಿ ಪಕ್ಷ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಇತ್ತೀಚೆಗೆ ಟೀಕಿಸಿದ್ದಾರೆ.
ಡಿಜಿಪಿ ನೇಮಕಾತಿ ಬಗ್ಗೆ ಉತ್ತರ ಪ್ರದೇಶ ಸರಕಾರ ಮತ್ತು ಯುಪಿಎಸ್’ಸಿ- ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡುವೆ ತೀವ್ರ ಭಿನ್ನಾಭಿಪ್ರಾಯಗಳಿವೆ. 2022ರ ಮೇ ತಿಂಗಳಿನಲ್ಲಿ 1987ನೇ ಬ್ಯಾಚಿನ ಐಪಿಎಸ್ ಅಧಿಕಾರಿ ಮುಕುಲ್ ಗೋಯೆಲ್ ಅವರನ್ನು ವಿಭಾಗದ ಕೆಲಸದಲ್ಲಿ ಹಿನ್ನಡೆ, ಸರಕಾರಿ ಕರ್ತವ್ಯ ನಿರ್ಲಕ್ಷಿಸಿದ್ದಾರೆ ಎಂದು ಡಿಜಿಪಿ ಹುದ್ದೆಯಿಂದ ತೆಗೆದು ಹಾಕಲಾಗಿತ್ತು. ಹಂಗಾಮಿ ಡಿಜಿಪಿ ಆಗಿರುವ ಡಿ. ಎಸ್. ಚೌಹಾಣ್ ಅವರು ಮಾರ್ಚ್ 31ರಂದು ನಿವೃತ್ತರಾಗಲಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ಈಗ ಉತ್ತರ ಪ್ರದೇಶ ಸರಕಾರವು ಖಾಯಂ ಡಿಜಿಪಿಯನ್ನು ನೇಮಿಸಬೇಕಾಗಿದೆ.
ಅದಾಗದಿದ್ದರೆ ಮತ್ತೊಬ್ಬರು ಹಿರಿಯ ಅಧಿಕಾರಿಯನ್ನು ಹಂಗಾಮಿಯಾಗಿ ಮಾಡಬೇಕು, ಇಲ್ಲವೇ ಹಾಗೆಯೇ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ ಜವಾಬ್ದಾರಿ ವಹಿಸಬೇಕಾಗಿದೆ. ಈ ಸರಕಾರವು ಹಂಗಾಮಿ ಡಿಜಿಪಿಯ ಅಧಿಕಾರಾವಧಿ ಹಿಗ್ಗಿಸಲು ನೋಡುತ್ತಿರುವುದಾಗಿ ವರದಿಯಾಗಿದೆ.


ಅರ್ಹ ಐಪಿಎಸ್ ಅಧಿಕಾರಿಗಳ ಹೆಸರುಗಳನ್ನು ಉತ್ತರ ಪ್ರದೇಶ ಸರಕಾರವು ಯುಪಿಎಸ್’ಸಿಗೆ ಕಳುಹಿಸಿದ ಮೇಲೆ, ರಚಿಸಲಾಗುವ ಮೂವರ ಸಮಿತಿಯು ಡಿಜಿಪಿಯನ್ನು ಆರಿಸುತ್ತದೆ.
ಡಿಜಿಪಿ ಆಗುವವರು 30 ವರ್ಷ ಇಲಾಖೆಯಲ್ಲಿ ಸೇವೆ ಸಲ್ಲಿಸಿರಬೇಕು ಎನ್ನುವುದು ಗೃಹ ಸಚಿವಾಲಯದ ಮಾರ್ಗದರ್ಶಿ ಸೂತ್ರವಾಗಿದೆ.

- Advertisement -


2022ರ ಸೆಪ್ಟೆಂಬರ್’ನಲ್ಲಿ ಉತ್ತರ ಪ್ರದೇಶ ಸರಕಾರವು 38 ಐಪಿಎಸ್ ಅಧಿಕಾರಿಗಳ ದೊಡ್ಡ ಪಟ್ಟಿಯನ್ನು ಯುಪಿಎಸ್’ಸಿಗೆ ಕಳುಹಿಸಿತ್ತು. ಯಾಕೆ ಗೋಯಲ್ ಅವರನ್ನು ತೆಗೆಯಲಾಯಿತು ಎಂದು ಯುಪಿಎಸ್’ಸಿ ಪ್ರಶ್ನಿಸಿತು ಮತ್ತು ಮೇ 2022ರಲ್ಲಿ ಡಿಜಿಪಿ ಹುದ್ದೆಗೆ ಅರ್ಹರಿದ್ದವರ ಪಟ್ಟಿಯನ್ನು ಕಳುಹಿಸಿ ಎಂದು ಉತ್ತರ ಪ್ರದೇಶ ಸರಕಾರಕ್ಕೆ ಆ ಪಟ್ಟಿಯನ್ನು ಹಿಂದಿರುಗಿಸಿತು.
ಅಲ್ಲದೆ ಸರಕಾರ ಕಳುಹಿಸಿದ ಪಟ್ಟಿಯಲ್ಲಿ 2022ರ ಸೆಪ್ಟೆಂಬರ್ 1ರಿಂದ 6 ತಿಂಗಳಲ್ಲಿ ನಿವೃತ್ತರಾಗುವವರ ಹೆಸರುಗಳು ಮಾತ್ರ ಇದ್ದವು.

Join Whatsapp