ಬೆಂಗಳೂರು: ಸಿವಿಲ್ ಆಸ್ತಿಯ ಸಂಬಂಧದ ಪ್ರಕರಣಗಳಲ್ಲಿ ಸಕ್ಷಮ ಇಲಾಖಾ ಮುಖ್ಯಸ್ಥರಿಂದ ಪೂರ್ವಾನುಮತಿಯನ್ನು ಪಡೆದು, ಕಂದಾಯ ಇಲಾಖೆಯ ಅಧಿಕಾರಿಗಳು, ನೌಕರರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡುವಂತೆ ಪೊಲೀಸರಿಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಪ್ರವೀನ್ ಸೂದ್ ಆದೇಶ ಹೊರಡಿಸಿದ್ದಾರೆ.
ಪೊಲೀಸ್ ಠಾಣೆಗಳಲ್ಲಿ ಸಿವಿಲ್ ಆಸ್ತಿಯ ಸಂಬಂಧ ದಾಖಲಾಗುವ ಪ್ರಕರಣಗಳಲ್ಲಿ ಸಕ್ಷಮ ಇಲಾಖಾ ಮುಖ್ಯಸ್ಥರ ಪೂರ್ವಾನುಮತಿಯನ್ನು ಪಡೆದು, ಕಂದಾಯ ಇಲಾಖೆಯ ಅಧಿಕಾರಿಗಳು, ನೌಕರರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲು ತಮ್ಮ ಅಧೀನದ ಅಧಿಕಾರಿ, ಪೊಲೀಸ್ ಠಾಣಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ತಿಳಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿ ದಾಖಲಾಗುವಂತ ಸಿವಿಲ್ ಆಸ್ತಿ ಪ್ರಕರಣ ಸಂಬಂಧ ಅನಗತ್ಯವಾಗಿ ತಹಶೀಲ್ದಾರ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುತ್ತಿತ್ತು. ಇದರಿಂದ ಕಿರಿಕಿರಿ ಉಂಟಾಗುತ್ತಿದ್ದು, ಕೆಲಸ ಮಾಡಲು ತೊಂದರೆ ಆಗುತ್ತಿದೆ ಎಂದು ಸರ್ಕಾರದ ಗಮನಕ್ಕೆ ಕಂದಾಯ ಇಲಾಖೆ ತಂದಿತ್ತು. ಈ ಹಿನ್ನೆಲೆಯಲ್ಲಿ ಈಗ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದ ನಂತರವೇ ನೋಟಿಸ್ ಜಾರಿಗೊಳಿಸುವಂತೆ ಪೊಲೀಸ್ ಇಲಾಖೆಯು, ಪೊಲೀಸ್ ಕಮೀಷನರ್, ಬೆಂಗಳೂರು , ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು , ಬೆಳಗಾವಿ, ಕಲಬುರ್ಗಿ ನಗರದವರಿಗೆ ಸೂಚಿಸಿದೆ.