ಬೆಂಗಳೂರು: ಕಲಬುರಗಿ ಪಾಲಿಕೆಯಲ್ಲಿ ಅಧಿಕಾರ ಹಿಡಿಯುವ ವಿಚಾರವಾಗಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ ಬಳಿ ಮಾತಾಡಿದ್ದಾರೆ. ಅದೇ ರೀತಿ ಕುಮಾರಸ್ವಾಮಿ ಬಳಿಯೂ ಮಾತಾಡಿದ್ದಾರೆ. ಆದರೆ ಸ್ಥಳೀಯ ಮುಖಂಡರ ಅಭಿಪ್ರಾಯ ಪಡೆಯದೇ ನಾವೇ ತೀರ್ಮಾನ ಮಾಡಬಾರದು ಎಂದು ಕುಮಾರಸ್ವಾಮಿಗೆ ಸೂಚಿಸಿದ್ದೇನೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ.ದೇವೇಗೌಡ ತಿಳಿಸಿದ್ದಾರೆ.
ಇಂದು ಜೆಪಿ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ನನ್ನ ಜೊತೆ ಮಾತನಾಡಿಲ್ಲ. ಕಲಬುರಗಿ ಪಾಲಿಕೆಯಲ್ಲಿ ಪಕ್ಷಕ್ಕೆ ನಾಲ್ಕು ಸೀಟ್ ಬಂದಿದೆ, ನಾಲ್ಕು ಸೀಟ್ ಬರುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಅಲ್ಲಿಗೆ ಹೆಚ್ ಡಿಕೆ ಹೋಗಿ ಪ್ರಚಾರ ಮಾಡಿದ್ದರು. ನಮ್ಮ ಪಕ್ಷ ಎಲ್ಲಿಯೂ ಇಲ್ಲವೇ ಇಲ್ಲ ಅನ್ನುವ ಸ್ಥಿತಿ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಬೆಳಗಾವಿಯಲ್ಲಿ ನಮ್ಮ ಸ್ಥಿತಿ ಚೆನ್ನಾಗಿ ಇರಲಿಲ್ಲ. ಅಲ್ಲಿ ಬಿಜೆಪಿ ಸ್ವೀಪ್ ಮಾಡಿದೆ, ಕಾಂಗ್ರೆಸ್ ಬಗ್ಗೆ ಮಾತಾಡಲು ಹೋಗಲ್ಲ , ಹುಬ್ಬಳ್ಳಿ ಧಾರವಾಡದಲ್ಲಿ ಮೂರ್ನಾಲ್ಕು ಸೀಟ್ ನಿರೀಕ್ಷೆ ಮಾಡಿದ್ದೆವು, ಒಂದು ಸೀಟ್ ಬಂದಿದೆ , ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳಲ್ಲಿ ಕೆಲ ಕಡೆ ಪೈಪೋಟಿ ಕೊಟ್ಟಿದ್ದೇವೆ ಎಂದು ಹೇಳಿದರು.
ಪಾಲಿಕೆ ಚುನಾವಣೆಯ ಫಲಿತಾಂಶದಿಂದ ಯಾರೂ ನಿರಾಶೆಯಾಗಬೇಕಿಲ್ಲ, ನಾವು ಹೆಚ್ಚಿನ ಸದಸ್ಯತ್ವ ನೋಂದಣಿ ಬಗ್ಗೆ ಗಮನ ಕೊಡುತ್ತೇವೆ, ಪಕ್ಷ ಕಟ್ಟುವ ಕಡೆ ಹೆಚ್ಚು ಗಮನ ಕೊಡುತ್ತೇವೆ, ನಾನು ಮತ್ತು ಪಕ್ಷದ ಎಲ್ಲಾ ನಾಯಕರು ಒಳಗೊಂಡಂತೆ ಪಕ್ಷ ಕಟ್ಟುವ ಕೆಲಸಕ್ಕೆ ಆದ್ಯತೆ ಕೊಡುತ್ತೇವೆ, ಒಟ್ಟಾಗಿ ಐಕ್ಯತೆಯಿಂದ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ದೇವೇಗೌಡ ತಿಳಿಸಿದರು.
ಸೋಲು- ಗೆಲುವು ನೋಡಿ ಕುಳಿತುಕೊಳ್ಳಲು ಆಗುವುದಿಲ್ಲ. ಸೋಲು-ಗೆಲುವು, ಸಿಹಿ-ಕಹಿಯನ್ನು ಈ ಹಿಂದೆಯೂ ನೋಡಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಿ.ಟಿ.ದೇವೇಗೌಡ ಪಕ್ಷದಿಂದ ದೂರ ಇದ್ದಾರೆ, ಆದರೆ ಪಕ್ಷಕ್ಕೆ ಡ್ಯಾಮೇಜ್ ಆಗುವ ಹೇಳಿಕೆ ಕೊಟ್ಟಿಲ್ಲ , ಅವರಿಗೆ ಮತ್ತು ಅವರ ಮಗನಿಗೆ ಟಿಕೆಟ್ ಕೊಡುವ ವಿಚಾರವಾಗಿ ಸಿದ್ದರಾಮಯ್ಯ ಹತ್ತಿರ ಮಾತಾನಾಡಿದ್ದೀನಿ ಎಂದು ಹೇಳಿಕೊಂಡಿದ್ದಾರೆ. ಸಿದ್ದರಾಮಯ್ಯ ಹೈಕಮಾಂಡ್ ಗಮನಕ್ಕೆ ತರುವುದಾಗಿ ಹೇಳಿದ್ದಾರೆ ಎಂದು ಕೂಡ ಹೇಳಿದ್ದಾರೆ. ಆದರೆ ಜೆಡಿಎಸ್ ಪಕ್ಷಕ್ಕೆ ಡ್ಯಾಮೇಜ್ ಆಗುವ ಹೇಳಿಕೆ ಕೊಟ್ಟಿಲ್ಲ, ಹಾಗಾಗಿ ಕ್ರಮ ಕೈಗೊಂಡಿಲ್ಲ ಎಂದರು.
ಜಿ.ಟಿ.ದೇವೇಗೌಡ ಜೊತೆ ನಾನು ರಾಜಕೀಯ ಮಾತನಾಡಿಲ್ಲ. ತಿರುಪತಿಗೆ ಹೋಗಿದ್ದಾಗ ಜಿ.ಟಿ.ದೇವೇಗೌಡ ಸಿಕ್ಕಿದ್ದರು. ಆಗ ನಾನೇ ನೋಡಿ ಕರೆದು ತಮಾಷೆ ಮಾಡಿದ್ದೆ. ನಿನ್ನ ದರ್ಶನ ಇಲ್ಲಿ ಆಯ್ತಲ್ಲಪ್ಪಾ ಎಂದಿದ್ದೆ, ಆಗ ನಿಮ್ಮ ದರ್ಶನ ಆಗಿದ್ದು ಖುಷಿ ಆಯ್ತು ಸರ್ ಅಂದಿದ್ರು ಅಷ್ಟೇ.ಯಾವುದೇ ರಾಜಕೀಯ ಮಾತುಕತೆ ಆಗಿಲ್ಲ ಎಂದು ದೇವೇಗೌಡ ಸ್ಪಷ್ಟಪಡಿಸಿದರು.
ಕೋಲಾರ ಶಾಸಕ ಶ್ರೀನಿವಾಸ್ ಗೌಡ ಕಾಂಗ್ರೆಸ್ ಜೊತೆ ಸೇರಿ ಪಕ್ಷಕ್ಕೆ ಡ್ಯಾಮೇಜ್ ಆಗುವ ರೀತಿ ಮಾತಾಡಿದ್ದರೆ ಅವರ ವಿರುದ್ಧ ರಾಜ್ಯಾಧ್ಯಕ್ಷರು ಕ್ರಮ ತೆಗೆದುಕೊಳ್ಳುತ್ತಾರೆ. ಕೋಲಾರ ವಿಚಾರದಲ್ಲಿ ಸಹಿಸಲು ಆಗುವುದಿಲ್ಲ. ಕೀಳಾಗಿ ಮಾತನಾಡಿದ್ದರೆ ಕ್ರಮ ಅನಿವಾರ್ಯವಾಗಿದೆ, ಕ್ರಮ ತೆಗೆದುಕೊಳ್ಳುತ್ತಾರೆ ಎಂದರು. ಬಸವರಾಜ ಬೊಮ್ಮಾಯಿ ಅವರು ಕುಮಾರಸ್ವಾಮಿ ಜೊತೆ ಮಾತಾಡಿರಬಹುದು, ನನ್ನ ಜೊತೆ ಬಿಜೆಪಿಯ ಯಾವ ನಾಯಕರು ಮಾತನಾಡಿಲ್ಲ ಎಂದು ಮಾಜಿ ಪ್ರಧಾನ ಮಂತ್ರಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.