ದೇವನಹಳ್ಳಿ: 579 ದಿನ ಪೂರೈಸಿದ ಅನಿರ್ಧಿಷ್ಟಾವಧಿ ಧರಣಿ

Prasthutha|

ದೇವನಹಳ್ಳಿ: ರೈತರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ದೀರ್ಘ 579ನೇ ದಿನಕ್ಕೆ ತಲುಪಿದೆ. ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1,777 ಎಕರೆ ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಸ್ವಾಧೀನ ಪಡಿಸಿಕೊಳ್ಳುವುದನ್ನು ವಿರ್ರೋಧಿಸಿ ರೈತರಿಂದ ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುತ್ತಿದೆ.

- Advertisement -

ಕೈಗಾರಿಕೆ ಉದ್ದೇಶಕ್ಕೆ ಫಲವತ್ತಾದ ಕೃಷಿ ಭೂಮಿಯನ್ನು ನೀಡುವ ಮಾತೇ ಇಲ್ಲ. ಭೂ ಸ್ವಾಧೀನ ಕುರಿತು ಹೊರಡಿಸಿರುವ ಪ್ರಾಥಮಿಕ ಅಧಿಸೂಚನೆಯನ್ನು ಸರ್ಕಾರ ಕೂಡಲೇ ರದ್ದುಪಡಿಸಬೇಕೆಂದು ಧರಣಿ ನಿರತ ರೈತರು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟನಿರತರು, ಪ್ರತಿ ಗ್ರಾಮದಲ್ಲಿಯೂ ಸಭೆ ನಡೆಸಿ, ರೈತರಿಂದ ಮಾಹಿತಿ ಸಂಗ್ರಹಿಸಲಾಗಿದೆ. ಅವರೆಲ್ಲರೂ ಕೈಗಾರಿಕಾ ಉದ್ದೇಶಕ್ಕೆ ಭೂಮಿ ನೀಡಲು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

- Advertisement -

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಅವರೊಂದಿಗೆ ಸಭೆ ನಡೆಸಿದ ನಂತರ ಮತ್ತೊಮ್ಮೆ ರೈತರೊಂದಿಗೆ ಚರ್ಚಿಸಲಾಗಿದೆ. ಅಲ್ಲದೆ ಪ್ರತಿ ಗ್ರಾಮದಲ್ಲಿಯೂ ಸಭೆ ನಡೆಸಿ, ರೈತರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಗ್ರಾಮಗಳಲ್ಲಿಯೂ ಭೂಮಿ ನೀಡುವುದಿಲ್ಲ ಎಂಬ ಕಠಿಣ ಸಂದೇಶ ರವಾನಿಸಿದ್ದಾರೆ ಎಂದು ತಿಳಿಸಿದರು.

ಸರ್ಕಾರ ಪ್ರಸ್ತಾಪಿಸಿರುವ ಪರಿಹಾರ ಬೇಕಾಗಿಲ್ಲ, ಯಾವುದೇ ಸಂದರ್ಭದಲ್ಲಿಯೂ ಭೂಮಿ ನೀಡಲು ನಾವು ತಯಾರಿಲ್ಲ. ಸರ್ಕಾರ ರೈತ ವಿರೋಧಿ ನೀತಿ ಮುಂದುವರೆಸಿದರೇ ಹೋರಾಟವನ್ನು ಮತ್ತಷ್ಟು ತೀವ್ರಗೊಳ್ಳಿಸಲಾಗುವುದು ಎಂದು ರೈತ ಮುಖಂಡರು ಎಚ್ಚರಿಸಿದ್ದಾರೆ.

ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ ಚಂದ್ರ ತೇಜಸ್ವಿ, ಪ್ರಭಾ ಬೆಳವಂಗಲ, ರೈತ ಮುಖಂಡರಾದ ನಲ್ಲಪ್ಪನಹಳ್ಳಿ ನಂಜಪ್ಪ,ಮಾರೇಗೌಡ, ಕಾರಳ್ಳಿ ಶ್ರೀನಿವಾಸ್, ಮಾರೇಗೌಡ ಹ್ಯಾಡಾಳ, ಅಶ್ವಥಪ್ಪ, ಸುಬ್ರಹ್ಮಣ್ಯ, ವೆಂಕಟರಾಯಪ್ಪ, ವೆಂಕಟಪ್ಪ, ನಂದನ್, ಪ್ರಮೋದ್, ಮುಕುಂದ್, ಮೋಹನ್, ವೆಂಕಟರಮಣಪ್ಪ, ಸೇರಿದಂತೆ 13 ಹಳ್ಳಿಗಳ ನೂರಾರು ರೈತರು ಧರಣಿಯಲ್ಲಿ ಉಪಸ್ಥಿತರಿದ್ದರು.

ಭೂ ದಲ್ಲಾಳಿಗಳು ಭೂಮಿಯನ್ನು ಕಸಿಯುವ ಹುನ್ನಾರದಿಂದ ಸುದ್ದಿ ಹಬ್ಬಿಸುತ್ತಿದ್ದಾರೆ. ಕೆಲವು ವಾರಸ್ಸುದಾರರು ಇಲ್ಲದ ಭೂಮಿಯ ಅ.18ರಂದು ನಡೆದ ಸಭೆಯಲ್ಲಿ ಸಚಿವರಿಗೆ ಅಧಿಕಾರಿಗಳು 1777 ಎಕರೆ ಭೂಮಿಯಲ್ಲಿ ಕೇವಲ 559 ಎಕರೆ ಭೂಮಿ ರೈತರದ್ದು ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ಆದರೆ ವಾಸ್ತವದಲ್ಲಿ ಇದು ತಪ್ಪು ಮಾಹಿತಿ ಎಂದು ರೈತ ಮುಖಂಡರು ತಿಳಿಸಿದರು.




Join Whatsapp