ಮಂಡ್ಯದಲ್ಲಿ ಭೀಕರ ಬರವಿದ್ದರೂ 3ನೇ ಬಾರಿ ವಿದೇಶ ಪ್ರವಾಸದಲ್ಲಿ ದರ್ಶನ್ ಪುಟ್ಟಣ್ಣಯ್ಯ: ಜನರ ಆಕ್ರೋಶ

Prasthutha|

ಮಂಡ್ಯ: ಜಿಲ್ಲೆಯಲ್ಲಿ ಭೀಕರ ಬರ ಪರಿಸ್ಥಿತಿಯಿದ್ದರೂ ಆ ಕುರಿತು ಸಂವೇದನೆ ಇಲ್ಲದೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತೆ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ ಎಂದು ಕ್ಷೇತ್ರದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಜನರ ಸಂಕಷ್ಟಕ್ಕೆ ಸ್ಪಂದಿಸದೆ ಪದೇ ಪದೇ ವಿದೇಶ ಪ್ರವಾಸದಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಕ್ಷೇತ್ರದ ಜನತೆ ಈ ಹಿಂದೆಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಗೆದ್ದ 5 ತಿಂಗಳಲ್ಲಿ ಮೂರನೇ ಬಾರಿಗೆ ಅಮೆರಿಕಾ ಪ್ರವಾಸ ಕೈಗೊಂಡಿದ್ದಾರೆ.

ಈ ಹಿಂದೆ ಜನರ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ್ದ ಶಾಸಕರು, ಅಮೆರಿಕಾದಲ್ಲಿ ತನ್ನ ಕಂಪನಿಯಿದೆ. ಕೆಲಸದ ನಿಮಿತ್ತ ಹೋಗಿದ್ದೆ. ಅಮೆರಿಕಾದಲ್ಲಿನ ಕಂಪನಿ ಮಾರಿ ಇನ್ಮುಂದೆ ಹುಟ್ಟೂರಿನಲ್ಲಿಯೆ ಇರುತ್ತೇನೆ. ಮತ್ತೆ ವಿದೇಶ ಪ್ರವಾಸ ಕೈಗೊಳ್ಳಲ್ಲ ಎಂದು ಹೇಳಿದ್ದರು. ಹೀಗೆ ಹೇಳಿದ್ದ ಕೆಲವೇ ದಿನಗಳಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತೆ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ.

- Advertisement -

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿಯೂ ವಿದೇಶ ಪ್ರವಾಸದಲ್ಲಿದ್ದ ಶಾಸಕರು ಈಗ ಮತ್ತೆ ವಿದೇಶ ಪ್ರವಾಸದಲ್ಲಿದ್ದು ರಾಜ್ಯೋತ್ಸವಕ್ಕೂ ಗೈರಾಗಿದ್ದಾರೆ. ಜಿಲ್ಲೆಯ ಜನ ಬರದಿಂದಾಗಿ ಜನರು ಕಂಗೆಟ್ಟಿದ್ದಾರೆ. ಕಾವೇರಿ ನೀರಿನ ಸಮಸ್ಯೆಯಿಂದಾಗಿಯೂ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಷ್ಟೆಲ್ಲ ತೊಂದರೆಗಳನ್ನು ಜನ ಎದುರಿಸುತ್ತಿದ್ದರೂ ಶಾಸಕರು ಮಾತ್ರ ವಿದೇಶ ಪ್ರವಾಸದಲ್ಲಿ ಕಾಲಕಳೆಯುತ್ತಿದ್ದು ಸರಿಯಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜವಾಬ್ದಾರಿಯುಳ್ಳ ಶಾಸಕ ಸ್ಥಾನದಲ್ಲಿದ್ದು, ಬರಗಾಲದಿಂದ ಜನರು ಪಡುವ ಬವಣೆಗಳಿಗೆ ಯಾವುದೇ ಸಂವೇದನೆ ಇಲ್ಲದಿರುವುದು ಶೋಚನೀಯ ಎಂದು ಕ್ಷೇತ್ರದ ಜನರು ಹೇಳುತ್ತಿದ್ದಾರೆ.




Join Whatsapp