ಪ್ರತಿ ತಿಂಗಳು ಕಡ್ಡಾಯವಾಗಿ ರಸ್ತೆ ಸುರಕ್ಷತಾ ಸಮಿತಿಯ ಸಭೆ ನಡೆಸಲು ಜಿಲ್ಲಾಧಿಕಾರಿ ಸೂಚನೆ

Prasthutha|

ಮಂಗಳೂರು: ಪ್ರತಿ ತಿಂಗಳು ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿಯ ಸಭೆ ನಡೆಸಿ, ಕೈಗೊಂಡ ನಿರ್ಣಯಗಳ ಬಗ್ಗೆ ಕೇಂದ್ರ ಸರ್ಕಾರದ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ವೆಬ್ ಸೈಟ್ ನಲ್ಲಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ .ಕೆ.ವಿ. ಅವರು ಸೂಚಿಸಿದರು.

- Advertisement -

ಅವರು ಆ.24ರ ಬುಧವಾರ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾ ಮಟ್ಟದ ರಸ್ತೆ ಸುರಕ್ಷತೆಯ ಬಗ್ಗೆ ಪ್ರತಿ ತಿಂಗಳು ಕಡ್ಡಾಯವಾಗಿ ಸಭೆ ನಡೆಸಬೇಕು, ಅದಕ್ಕೆ ಒಬ್ಬರು ನೋಡಲ್ ಅಧಿಕಾರಿಯನ್ನು ನಿಯೋಜಿಸಿ, ಸಭೆಯಲ್ಲಿ ಚರ್ಚೆಯಾದ ಹಾಗೂ ಕೈಗೊಂಡ ನಿರ್ಣಯಗಳ ಬಗ್ಗೆ 48 ತಾಸಿನೊಳಗೆ ವೆಬ್ ಸೈಟ್ ನಲ್ಲಿ ದಾಖಲಿಸಬೇಕು ಎಂದು ತಿಳಿಸಿದರು.

- Advertisement -

ಬ್ಲಾಕ್ ಸ್ಪಾಟ್ (ಕಪ್ಪು ಚುಕ್ಕೆ ಪ್ರದೇಶ)ಗಳಲ್ಲಿ ರಸ್ತೆ ದುರಸ್ತಿ ಇರುವ ಬಗ್ಗೆ ವಾಹನ ಸವಾರರು ನಿಧಾನವಾಗಿ ಚಲಿಸುವಂತೆ ಸೂಚಿಸುವ ನಾಮಫಲಕವನ್ನು ಅಳವಡಿಸಬೇಕು, ಗಂಭೀರ ಸ್ವರೂಪದ ಅಪಘಾತವಾಗಿ ಸಾವು ಸಂಭವಿಸಿದ ಸಂದರ್ಭಗಳಲ್ಲಿ ಆಡಿಟ್ ವರದಿ ನೀಡುವಂತೆಯೂ ಕ್ರಮ ವಹಿಸುವ ಬಗ್ಗೆ ಅವರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ದ್ವಿಚಕ್ರ ವಾಹನ ಸವಾರರು ತಮ್ಮ ಜೀವದ ಸುರಕ್ಷತಾ ದೃಷ್ಟಿಯಿಂದ ಐಎಸ್ ಐ ಚಿನ್ಹೆಯುಳ್ಳ ಹೆಲ್ಮೆಟ್ ಅನ್ನೇ ಧರಿಸಬೇಕು, ಈ ಬಗ್ಗೆ ಅಗತ್ಯ ಜಾಗೃತಿ ಮೂಡಿಸುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಾರಿಗೆ ಉಪ ಆಯುಕ್ತ ರವಿಶಂಕರ್ ಅವರಿಗೆ ತಿಳಿಸಿದರು, ನಿರ್ಮಾಣ ಕಾಮಗಾರಿಗಳನ್ನು ನಿರ್ವಹಿಸುವ ಇಲಾಖೆಗಳ ಕಾರ್ಯನಿರ್ವಾಹಕ ಅಭಿಯಂತರರು ಇನ್ನು ಮುಂದೆ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಗೆ ಹಾಜರಾಗುವಂತೆ ಸೂಚಿಸಿದರು.

ಶಾಲೆ ಹಾಗೂ ಕಾಲೇಜುಗಳ ಬಸ್ಗಳ ಪರ್ಮಿಟ್, ಆ ವಾಹನಗಳ ಸ್ಥಿತಿಗತಿಗಳ ಬಗ್ಗೆ ತಪಾಸಣೆ ನಡೆಸಬೇಕು, ಆಯಾ ಬಸ್ಗಳಲ್ಲಿ ಸಂಬಂಧಿಸಿದ ಶಾಲೆಗಳ ಹೆಸರು, ಅಪಾಯಕಾರಿ ಚಾಲನೆ ಕಂಡುಬಂದರೆ ಸಂಪರ್ಕಿಸಬೇಕಾದವರ ದೂರವಾಣಿ ಸಂಖ್ಯೆಯನ್ನು ಕಾಣುವಂತೆ ನಮೂದಿಸಬೇಕು, ಈ ಕುರಿತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಾರಿಗೆ ಉಪ ಆಯುಕ್ತರೇ ಖುದ್ದಾಗಿ ಶಾಲೆ-ಕಾಲೇಜುಗಳ ಬಸ್ಸುಗಳನ್ನು ಪರಿಶೀಲಿಸಬೇಕು, ಯಾವುದೇ ರೀತಿಯ ಅವಘಡಗಳು ಸಂಭವಿಸುವುದಕ್ಕಿಂತ ಮುಂಚೆ ಎಚ್ಚೆತ್ತುಕೊಳ್ಳಬೇಕು, ಆ ಹಿನ್ನಲೆಯಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುವ ಆಟೋಗಳು ಕಡ್ಡಾಯವಾಗಿ ಐದು ಮಕ್ಕಳ ಪ್ರಯಾಣಕ್ಕೆ ಮಾತ್ರ ಅವಕಾಶವಿದೆ, ಈ ಮಿತಿಯನ್ನು ಮೀರಿ ಹೆಚ್ಚು ಮಕ್ಕಳೊಂದಿಗೆ ಪ್ರಯಾಣಿಸಿದಲ್ಲಿ ಸಂಬಂಧಿಸಿದ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರು ತಿಳಿಸಿದರು.

ಫುಟ್ ಪಾತ್ ಗಳ ಮೇಲೆ ವಾಹನಗಳು ಚಲಿಸಿದಂತೆ ನಿಗಾ ವಹಿಸಬೇಕು, ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ರಸ್ತೆ ಬದಿಗಳಲ್ಲಿ ಹಾಕಲಾದ ಕಟ್ಟಡ ನಿರ್ಮಾಣ ಸಾಮಗ್ರಿಗಳಿಂದ ಅಪಘಾತ ಸಂಭವಿಸಿದ್ದಲ್ಲೀ ಆ ಕಟ್ಟಡ ಮಾಲೀಕರ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಭಗವಾನ್ ಸೋನಾವಣೆ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಸಹಾಯಕ ಆಯುಕ್ತ ಮದನ್ ಮೋಹನ್, ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಲಿಂಗೇಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸುಧಾಕರ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಮದ ಮಂಗಳೂರು ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ, ಪುತ್ತೂರು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀನಾಥ್ ಅಜಿಲ, ಬಂಟ್ವಾಳ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧೀಕ್ಷಕ ಸಚಿನ್ ತಾಳೇಕರ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಜಂಟಿ ನಿರ್ದೇಶಕ ರಮೇಶ್, ಸಂಚಾರ ಸಲಹಾ ಸಮಿತಿಯ ಸದಸ್ಯ ಜಿ.ಕೆ. ಭಟ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಸಭೆಯಲ್ಲಿದ್ದರು.

Join Whatsapp