ಸೂರು ಇಲ್ಲದ ಬುಡಕಟ್ಟು ಕುಟುಂಬಗಳ ಬಗ್ಗೆ ಕಾಳಜಿಯಿಲ್ಲದ ಇಲಾಖೆ: ಅಹೋರಾತ್ರಿ ಧರಣಿಗೆ 46 ದಿವಸವಾದರೂ ಹತ್ತಿರ ಸುಳಿಯದ ಅಧಿಕಾರಿಗಳು

Prasthutha|

ಜನಪ್ರತಿನಿಧಿಗಳನ್ನು ಭೇಟಿಯಾದ SDTU ಜಿಲ್ಲಾ ನಿಯೋಗ

- Advertisement -

ಕೊಡಗು: ಕಾಫಿ ಎಸ್ಟೇಟ್ ನಲ್ಲಿ ಕಾರ್ಮಿಕರಾಗಿ ದುಡಿಯುವ ಮೂಲ ನಿವಾಸಿಗಳು ಕಳೆದ 46 ದಿವಸಗಳಿಂದ ಭೂಮಿ ಮತ್ತು ಆಶ್ರಯ ನಿವೇಶನಕ್ಕಾಗಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಆದರೆ ಇದುವರೆಗೆ ಬುಡಕಟ್ಟು ಕುಟುಂಬಗಳ ಹತ್ತಿರ ಸುಳಿಯದ ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (SDTU) ಕೊಡಗು ಜಿಲ್ಲಾ ಸಮಿತಿ ಖಂಡನೆ ವ್ಯಕ್ತಪಡಿಸಿದ್ದು, SDTU ಜಿಲ್ಲಾ ನಿಯೋಗ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದೆ.

ಪ್ರತಿಭಟನಾ ನಿರತರನ್ನು ಭೇಟಿ ಮಾಡಿ, ಸಾಂತ್ವನ ಹೇಳಿದ SDTU ಕೊಡಗು ಜಿಲ್ಲಾ ಸಮಿತಿ ನಿಯೋಗ, ಸುಮಾರು 98 ಕುಟುಂಬಗಳು ವಾಸಿಸುವ ಇಲ್ಲಿನ ಬುಡಕಟ್ಟು ಕುಟುಂಬಗಳಿಗೆ ಆಶ್ರಯ ನೀಡಬೇಕಾದ ಜನಪ್ರತಿನಿಧಿಗಳು ಮತ್ತು ಸರ್ಕಾರ ಆಶ್ರಯ ನಿವೇಶನ ನೀಡದೆ ಸತಾಯಿಸುತ್ತಿರುವುದು ಬೇಜವಾಬ್ದಾರಿತನದ ನಡೆ ಎಂದು ಹೇಳಿದೆ.

- Advertisement -

ಈ ಸಂದರ್ಭದಲ್ಲಿ ಮಾತನಾಡಿದ SDTU ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೂಫ್ ಪಾಲಿಬೆಟ್ಟ, ಸರ್ಕಾರ ಶೀಘ್ರವಾಗಿ ನಿವೇಶನ ರಹಿತ ಬುಡಕಟ್ಟು ಕುಟುಂಬಗಳಿಗೆ ನಿವೇಶನ ಮಂಜೂರು ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸಮಗ್ರ ಗಿರಿಜನ ಯೋಜನಾ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಶಾಸಕ ಕೆಜಿ ಬೋಪಯ್ಯ ರವರ ಕಚೇರಿ ಎದುರು ಬುಡಕಟ್ಟು ಪ್ರತಿಭಟನಾಕಾರರು ಧರಣಿ ನಡೆಸುತ್ತಿದ್ದರೂ ಸೂರು ಇಲ್ಲದ ಕುಟುಂಬಗಳ ಬಗ್ಗೆ ಕಾಳಜಿ ವ್ಯಕ್ತಪಡಿಸದ ಇಲಾಖೆ ಮತ್ತು ಜನಪ್ರತಿನಿಧಿಗಳ ದೋರಣೆ ಮಾಧ್ಯಮಗಳಲ್ಲಿ ಚರ್ಚೆಯಾಗದೇ ಇರುವುದನ್ನು ಅವರು ಪ್ರಶ್ನಿಸಿದ್ದಾರೆ.

ಅಧಿಕಾರಿಗಳನ್ನು ಭೇಟಿ ಮಾಡಿದ SDTU ನಿಯೋಗದಲ್ಲಿ ಮುಖಂಡರಾದ ಯೂಸುಫ್ ಹುಂಡಿ, ಫೈಸಲ್ ಪಾಲಿಬೆಟ್ಟ, ಇಬ್ರಾಹಿಂ ಗೋಣಿಕೊಪ್ಪ ಹಂಸ ಪಾಲಿಬೆಟ್ಟ, ಫೈಸಲ್ ಬಜಗೊಲ್ಲಿ ಮುಂತಾದವರು ಉಪಸ್ಥಿತರಿದ್ದರು.



Join Whatsapp