ಬಜೆಟ್’ನಲ್ಲಿ ಖಾಸಗಿ ವಾಹನ ಚಾಲಕರ ಬೇಡಿಕೆಗಳ ಕಡೆಗಣನೆ: ಗಂಡಸಿ ಸದಾನಂದ ಸ್ವಾಮಿ

Prasthutha|

ಬೆಂಗಳೂರು; ರಾಜ್ಯದಲ್ಲಿ ಅತಿ ಹೆಚ್ಚು ಜನ ಸಂಖ್ಯೆ ಹೊಂದಿರುವ ಖಾಸಗಿ ವಾಹನ ಚಾಲಕರ ಜ್ವಲಂತ ಸಮಸ್ಯೆಗಳನ್ನು ಈಡೇರಿಸಲು ರಾಜ್ಯ ಬಿಜೆಪಿ ಸರ್ಕಾರ ವಿಫಲವಾಗಿದ್ದು, ಚಾಲಕ ಸಮುದಾಯಕ್ಕೆ ಉಂಡೆ ನಾಮ ಹಾಕಿದೆ ಎಂದು ರಾಷ್ಟ್ರೀಯ ವಾಹನ ಚಾಲಕರ ಒಕ್ಕೂಟದ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -


ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಚಾಲಕರ ಶ್ರೇಯೋಭಿವೃದ್ಧಿಗಾಗಿ ನಿಗಮ ಮಂಡಳಿ ರಚಿಸುವ ಮತ್ತು ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಮಾಡಿದ ಮನವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದಿಸಿಲ್ಲ. ಸಾರಿಗೆ ವಲಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಪಿಎಂ ಗತಿಶಕ್ತಿ ಯೋಜನೆ ಜಾರಿಗೊಳಿಸಿ ಸಾಗಾಣೆ ವಲಯಕ್ಕೆ ಹೊಸ ಆಯಾಮ ನೀಡುತ್ತಿದೆ. ಆದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕೇಂದ್ರದ ಆಶಯಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.


ಕೋವಿಡ್ ಸಮಯದಲ್ಲಿ ಚಾಲಕ ಸಮುದಾಯ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದು, ಜೀವ ಲೆಕ್ಕಿಸದೇ ಜೀವ ಮತ್ತು ಜೀವನೋಪಾಯವನ್ನು ರಕ್ಷಿಸಲು ಆದ್ಯತೆ ನೀಡಿತ್ತು. ಇಂತಹ ಸಮುದಾಯದ ಕನಿಷ್ಠ ಬೇಡಿಕೆಗಳನ್ನು ಈಡೇರಿಸುವಂತೆ ಮಾಡಿದ ಮನವಿಗೆ ಸ್ಪಂದನೆ ದೊರೆತಿಲ್ಲ. ಚಾಲಕರ ಸಂಕಷ್ಟಗಳನ್ನು ಅರಿಯುವಲ್ಲಿ ಸಚಿವ ಬಿ. ಶ್ರೀ ರಾಮುಲು ವಿಫಲರಾಗಿದ್ದಾರೆ ಎಂದು ಅವರು ದೂರಿದ್ದಾರೆ.
ಚಾಲಕರ ದಿನಾಚರಣೆಯನ್ನು ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಘೋಷಿಸಿದ್ದರು. ಪ್ರತಿಯೊಂದು ಜಿಲ್ಲೆಯಲ್ಲಿ 10 ಚಾಲಕರಿಗೆ ಸಾರಥಿ ನಂಬರ್ ಒನ್ ಪ್ರಶಸ್ತಿ ಜೊತೆಗೆ 25,000 ಧನಸಹಾಯ ನೀಡುವ ಕಾರ್ಯಕ್ರಮವನ್ನು ಬಜೆಟ್ ನಲ್ಲಿ ಪ್ರಕಟಿಸಿದ್ದರು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದಿನಾಚರಣೆ ಆಚರಿಸುವುದನ್ನು ಕೈಬಿಟ್ಟಿದೆ. ಓಲಾ ಉಬರ್ ನಂತಹ ಮಹಾ ವಂಚಕ ಸಂಸ್ಥೆಗಳ ವಿರುದ್ಧ ಹೋರಾಟ ಮಾಡಿ ಈ ಸಂಸ್ಥೆಗಳ ವಿರುದ್ಧ ಸರ್ಕಾರವೇ ಆಪ್ ಸಿದ್ಧಪಡಿಸಿ ಚಾಲಕರಿಗೆ ಮತ್ತು ಗ್ರಾಹಕರಿಗೆ ಓಲಾ, ಉಬರ್ ನಿಂದ ವಂಚನೆ ತಡೆಯಲು ಮನವಿ ಮಾಡಲಾಗಿತ್ತು. ಹುಸಿ ಸುಳ್ಳಿನ ಭರವಸೆ ನೀಡಿ ಇದೀಗ ಚಾಲಕರಿಗೆ ಅನ್ಯಾಯ ಮಾಡಿರುವುದು ತೀವ್ರ ಖಂಡನೀಯ. ಮುಂಬರುವ ಚುನಾವಣಾ ಸಂದರ್ಭದಲ್ಲಿ ಚಾಲಕರು ಸರ್ಕಾರಕ್ಕೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಗಂಡಸಿ ಸದಾನಂದ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ.



Join Whatsapp