ನವದೆಹಲಿ: ರಾಜಧಾನಿ ದೆಹಲಿಯು ಉತ್ತರ, ದಕ್ಷಿಣ, ಪೂರ್ವ ಎಂದು ಮೂರು ಮಹಾನಗರ ಪಾಲಿಕೆಗಳನ್ನು ಒಂದೇ ಬೃಹತ್ ಮಹಾನಗರ ಪಾಲಿಕೆಯಡಿ ತರಲು ಗೃಹ ಸಚಿವಾಲಯವು ಸುತ್ತೋಲೆ ಹೊರಡಿಸಿದೆ.
ಈ ಹಿಂದೆ ಒಂದೇ ಇದ್ದ ಪಾಲಿಕೆಯನ್ನು ಮೂರಾಗಿ ವಿಭಜಿಸಲಾಗಿತ್ತು. 2007ರಿಂದ ದಿಲ್ಲಿಯ ಪಾಲಿಕೆಯಲ್ಲೆಲ್ಲ ಬಿಜೆಪಿಯೇ ಅಧಿಕಾರದಲ್ಲಿದೆ.
ಮಾರ್ಚ್ 9ರಂದು ದಿಲ್ಲಿ ರಾಜ್ಯ ಚುನಾವಣಾ ಆಯೋಗವು ಪಾಲಿಕೆ ಚುನಾವಣಾ ಘೋಷಣೆಗೆ ಮುಂದಾದಾಗ ಬಿಜೆಪಿ ಈ ಒಂದಾಗಿಸುವ ತೀರ್ಮಾನ ಕೈಗೊಂಡಿತ್ತು. ಇದು ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷಗಳ ನಡುವೆ ಭಾರೀ ವಾಗ್ಯುದ್ಧಕ್ಕೆ ಕೂಡ ಕಾರಣವಾಗಿತ್ತು. ಬಿಜೆಪಿಯು ಚುನಾವಣೆ ಎದುರಿಸಲು ಭಯ ಪಡುತ್ತಿದೆ ಎಂದು ಎಎಪಿ ಆರೋಪಿಸಿತ್ತು. ಎಎಪಿ ಸರಕಾರ, ಪಾಲಿಕೆಗಳನ್ನು ಮಲತಾಯಿ ಧೋರಣೆಯಿಂದ ನೋಡಿತು ಎಂದು ಗೃಹ ಮಂತ್ರಿ ಅಮಿತ್ ಶಾ ಟೀಕಿಸಿದ್ದರು.
ಮುನಿಸಿಪಲ್ ಕಾರ್ಪೊರೇಶನ್ ತಿದ್ದುಪಡಿ ಮಸೂದೆ ತರುವುದಾಗಿ ಗೃಹ ಸಚಿವಾಲಯ ತಿಳಿಸಿದೆ.
ಹೊಸ ಕಾಯ್ದೆಯಂತೆ ಮುನಿಸಿಪಾಲಿಟಿಗೆ ಮುಂದಿನ ಚುನಾವಣೆ ನಡೆಯುವವರೆಗೆ ಆಡಳಿತಾಧಿಕಾರಿ ನೇಮಕಗೊಂಡು ಅಧಿಕಾರಿಗಳ ಆಳ್ವಿಕೆಗೆ ಒಳಪಡುತ್ತದೆ.
“ಕೇಂದ್ರ ಸರಕಾರವು ಪಾಲಿಕೆಗಳನ್ನು ಒಗ್ಗೂಡಿಸಲು ಒಬ್ಬ ವಿಶೇಷಾಧಿಕಾರಿಯನ್ನು ನೇಮಿಸುತ್ತದೆ. ಒಂದಾಗದೆ ಚುನಾವಣೆ ಇಲ್ಲ” ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಉತ್ತರ ದಿಲ್ಲಿ ಪಾಲಿಕೆಯ ಅಧಿಕಾರಾವಧಿ ಮಂಗಳವಾರ ಮುಗಿದಿದೆ. ದಕ್ಷಿಣ ಪಾಲಿಕೆಯ ಅಧಿಕಾರಾವಧಿ ಬುಧವಾರ ಮುಗಿದಿದೆ. ಪೂರ್ವ ಮುನಿಸಿಪಲ್ ನ ಅಧಿಕಾರಾವಧಿ ಶನಿವಾರ ಮುಗಿಯುತ್ತದೆ.
“ಮೇ 23ರಂದು ವಿಶೇಷ ಅಧಿಕಾರಿಯ ನೇಮಕವಾಗುವ ಸಾಧ್ಯತೆ ಇದೆ. ಏಕೆಂದರ ಮೇ 22ಕ್ಕೆ ಎಲ್ಲ ಪಾಲಿಕೆಗಳ ಅವಧಿ ಮುಗಿದಂತಾಗುತ್ತದೆ. ಹಾಗಾಗಿ ಒಗ್ಗೂಡಿದ ಪಾಲಿಕೆ ಎಂದು ಯಾರಾದರೂ ಅಧಿಕಾರ ವಹಿಸಿಕೊಳ್ಳಲೇಬೇಕಾಗಿದೆ” ಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಒಗ್ಗೂಡುವುದು ಹಲವು ಸಿಕ್ಕುಗಳಿಗೆ ದಾರಿ ಮಾಡುತ್ತದೆ. ಈಗ ಒಟ್ಟು ಕೌನ್ಸಿಲರ್ ಗಳ ಸಂಖ್ಯೆಯು 272 ಇದ್ದು, ಅದನ್ನು 250 ಮೀರದಂತೆ ಮಿತಿಗೊಳಿಸಬೇಕಾಗಿದೆ. ದಿಲ್ಲಿ ಮುನಿಸಿಪಲ್ ಕಾರ್ಪೊರೇಶನ್ ಕಾಯ್ದೆ 1957ರಂತೆ ಪಾಲಿಕೆಯ 11 ವಿಭಾಗಗಳು ಕೇಂದ್ರ ಸರಕಾದ ಬದಲಿ ವ್ಯವಸ್ಥೆಯಡಿ ಬರುತ್ತವೆ.
ಕ್ಷೇತ್ರ ವಿಂಗಡಣೆ ಒಂದು ವರುಷ ತೆಗೆದುಕೊಳ್ಳಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಹೀಗೆ ಒಗ್ಗೂಡುವುದರಿಂದ ಪಾಲಿಕೆ ಕಮಿಶನರ್ ಸಹಿತ ಹಲವಾರು ಹುದ್ದೆಗಳು ಕಡಿತಗೊಳ್ಳುತ್ತವೆ. “ಮೂರು ಪಾಲಿಕೆಗಳು ಸೇರಿ ಒಂದೂವರೆ ಲಕ್ಷ ಉದ್ಯೋಗಿಗಳಿದ್ದಾರೆ. ಕೆಳ ಮಟ್ಟದಲ್ಲಿ ಇನ್ನಷ್ಟು ಉದ್ಯೋಗಗಳ ಅಗತ್ಯವಿದೆ. ಪಾಲಿಕೆ ಒಂದಾದರೆ ಹೆಚ್ಚುವರಿ ನೌಕರರು ಎಂಬ ಸಮಸ್ಯೆ ಎದುರಾಗುತ್ತದೆ” ಎಂದರು ಪಾಲಿಕೆಯ ಹಿರಿಯ ಅಧಿಕಾರಿ.
ಪಾಲಿಕೆ ಒಂದಾದಾಗಲೂ ಒತ್ತುವರಿ ತೆರವು ಬುಲ್ಡೋಜರ್ ಕೆಲಸ ಇದ್ದೇ ಇರುತ್ತದೆ ಎಂದರು ಇನ್ನೊಬ್ಬ ಅಧಿಕಾರಿ.