ಆಗ್ರಾ: ದೆಹಲಿ ಗಲಭೆಗಳ ಕುರಿತಾದ ಪ್ರಕರಣಗಳ ವಿಚಾರಣೆಗೆ ಸಂಬಂಧಿಸಿದ ಬಹುಮುಖ್ಯ ಬೆಳವಣಿಗೆಯಲ್ಲಿ ಉಮರ್ ಖಾಲಿದ್ ಪರ ವಕೀಲರು ಸಹ ಆರೋಪಿ ಶಾರ್ಜೀಲ್ ಇಮಾಂ ಹಾಗೂ ಖಾಲಿದ್ ಸೈದ್ಧಾಂತಿಕವಾಗಿ ಒಂದೇ ಅಲ್ಲ ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ.
ಫೆಬ್ರವರಿ 2020ರಲ್ಲಿ ನಡೆದ ದೆಹಲಿ ಗಲಭೆಗಳಿಗೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಅಡಿ ಉಮರ್ ಖಾಲಿದ್ ಹಾಗೂ ಶಾರ್ಜೀಲ್ ಇಮಾಂ ಬಂಧನವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಶಾರ್ಜೀಲ್ ಇಮಾಂ ಹಾಗೂ ಉಮರ್ ಖಾಲಿದ್ ಸೈದ್ಧಾಂತಿಕವಾಗಿ ಐಕ್ಯಮತವುಳ್ಳವರು ಎನ್ನುವ ರೀತಿಯಲ್ಲಿ ಬಿಂಬಿಸಲಾಗಿದೆ. ಈ ಬಗ್ಗೆ ಖಾಲಿದ್ ಪರ ಹಿರಿಯ ವಕೀಲರಾದ ತ್ರಿದೀಪ್ ಪಾಯ್ಸ್ ಅವರು ಮಂಗಳವಾರ ವಿಚಾರಣೆ ವೇಳೆ ತೀವ್ರ ಆಕ್ಷೇಪ ದಾಖಲಿಸಿದರು (ಉಮರ್ ಖಾಲಿದ್ ವರ್ಸಸ್ ರಾಜ್ಯ ಸರ್ಕಾರ).
ಒಮ್ಮೆ ವಿಚಾರಣೆ ವೇಳೆ ಆರೋಪ ಪಟ್ಟಿಯ ಪರಿಶೀಲನೆ ಅರಂಭವಾದರೆ, ಎಲ್ಲ ಆರೋಪಿಗಳನ್ನೂ ಒಂದೆ ಬಣ್ಣದಲ್ಲಿ ಚಿತ್ರಿಸಿರುವ ಪ್ರಾಸಿಕ್ಯೂಷನ್ ವಾದ ತಲೆಕೆಳಕಾಗಲಿದೆ ಎಂದು ತ್ರಿದೀಪ್ ವಿಚಾರಣೆ ವೇಳೆ ಹೇಳಿದರು. ಚಾರ್ಜ್‌ಶೀಟ್‌ನಲ್ಲಿ ಖಾಲಿದ್ ಅವರನ್ನು ಇಮಾಂ ಅವರ ಹಿರಿಯ, ಮಾರ್ಗದರ್ಶಿ ಎನ್ನಲಾಗಿದೆ. ಪ್ರಾಸಿಕ್ಯೂಷನ್ ಈ ‘ಹಿರಿಯ, ಮಾರ್ಗದರ್ಶಿ’ ಎನ್ನುವ ಬಣ್ಣವನ್ನು ಖಾಲಿದ್‌ಗೆ ಕಟ್ಟಿದೆ. “ಎಲ್ಲ ಆರೋಪಿಗಳನ್ನೂ ಒಂದೇ ಬಣ್ಣದಿಂದ ಚಿತ್ರಿಸಲು ಹೊರಟ ನಿಮ್ಮ ಆಸೆಯು ಆರೋಪಪಟ್ಟಿಯನ್ನು ಪರಿಶೀಲಿಸಿದಾಗ ಕುಸಿಯಲಿದೆ… ಇದನ್ನೆಲ್ಲಾ ನೀವು ಎಲ್ಲಿಂದ ತೆಗೆದುಕೊಂಡಿರಿ? ಇದೆಲ್ಲ ನಿಮ್ಮ ಮನಸ್ಸಿನಲ್ಲಿ ಮೂಡಿರುವಂಥದ್ದು. ಇದರಲ್ಲಿ ಅರ್ಧದಷ್ಟು ನಿಮ್ಮ ಅಧಿಕಾರಿಗಳ, ಚಿತ್ರಕತೆಗಾರರ ಸಶಕ್ತ ಕಲ್ಪನೆಯಿಂದ ಕೂಡಿರುವಂಥದ್ದು,” ಎಂದು ಅವರು ವಾದಿಸಿದರು.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಅವರ ಮುಂದೆ ನಡೆದ ಭೌತಿಕ ವಿಚಾರಣೆ ವೇಳೆ ಪಾಯ್ಸ್ ಅವರು ತಮ್ಮ ವಾದಮಂಡನೆಯನ್ನು ಮಾಡಿದರು. ಉಮರ್ ಖಾಲಿದ್ ಪರವಾಗಿ ಸೆಕ್ಷನ್ 437 ಅಪರಾಧ ಸಂಹಿತೆ (ಸಿಆರ್‌ಪಿಸಿ ) ಅಡಿ ಕೋರಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಧೀಶರು ಆಲಿಸಿದರು. ಈ ಹಿಂದೆ ಸೆಕ್ಷನ್ 439ರ ಅಡಿ ಸಲ್ಲಿಸಲಾಗಿದ್ದ ಜಾಮೀನು ಅರ್ಜಿಯನ್ನು ಪಾಯ್ಸ್ ಹಿಂಪಡೆದರು.
ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರುದ್ಧದ ಪ್ರದರ್ಶನಗಳ ಸಂಘಟನೆಗೆಂದು ಮಾಡಲಾಗಿದ್ದ ಮುಸ್ಲಿಂ ವಿದ್ಯಾರ್ಥಿಗಳ ವಾಟ್ಸಪ್ ಗುಂಪಿನಲ್ಲಿ ಖಾಲಿದ್ ಸದಸ್ಯರಾಗಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಆರೋಪಿಸಲಾಗಿದೆ. ಈ ಬಗ್ಗೆ ಆಕ್ಷೇಪ ದಾಖಲಿಸಿದ ಪಾಯ್ಸ್, “ಮುಸ್ಲಿಂ ವಿದ್ಯಾರ್ಥಿಗಳ ವಾಟ್ಸಪ್ ಗುಂಪನ್ನು ರಚಿಸುವುದು ಭಯೋತ್ಪಾದನೆಯೇ? ನನ್ನ (ಖಾಲಿದ್) ಅಣತಿಯಂತೆ ಗುಂಪನ್ನು ರೂಪಿಸಲಾಗಿದೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ,” ಎಂದರು.
ಇನ್ನು ಆರೋಪಪಟ್ಟಿಯಲ್ಲಿ ಖಾಲಿದ್ ಹಾಗೂ ಇಮಾಂ ಸೈದ್ಧಾಂತಿಕವಾಗಿ ಒಂದೇ ಎನ್ನುವ ವಾದವನ್ನು ಅಲ್ಲಗಳೆದ ಪಾಯ್ಸ್, ಆರೋಪ ಪಟ್ಟಿಯಲ್ಲಿಯೇ ಇಮಾಂ ತನ್ನಿಷ್ಟದಂತೆ ಪ್ರತಿಭಟನೆಗಳನ್ನು ಆಯೋಜಿಸಲು ಇಚ್ಚಿಸಿದ್ದ ಬಗ್ಗೆ ಉಲ್ಲೇಖವಿರುವುದನ್ನು ಎತ್ತಿ ತೋರಿದರು. ಕೆಲ ಪ್ರತಿಭಟನೆಗಳನ್ನು ಇಮಾಂ ಮಾತ್ರವೇ ಆಯೋಜನೆ ಮಾಡಿರುವ ಬಗ್ಗೆಯೂ ಆರೋಪಪಟ್ಟಿಯಲ್ಲಿದೆ. “ಸಂಭಾಷಣೆಗಳು (ಚಾಟ್ಸ್) ಇಮಾಂ ತನ್ನಿಷ್ಟದಂತೆ (ಪ್ರತಿಭಟನೆಗಳ ಆಯೋಜನೆ) ಮಾಡಲು ಮುಂದಾಗಿರುವುದನ್ನು ತೋರುತ್ತವೆ. ಅವರಿಬ್ಬರೂ (ಖಾಲಿದ್ – ಇಮಾಂ) ಸೈದ್ಧಾಂತಿಕವಾಗಿ ಒಗ್ಗೂಡಿದವರಲ್ಲ,” ಎಂದು ವಾದಿಸಿದರು.
ಪ್ರಕರಣಕ್ಕೆ ಸಂಬಂಧಿಸಿದ ವಾದ ಮಂಡನೆಗಳು ನವೆಂಬರ್ 2, 2021 ರಂದು ಮತ್ತೆ ನಡೆಯಲಿವೆ.
(ಕೃಪೆ: ಬಾರ್ ಆ್ಯಂಡ್ ಬೆಂಚ್)