ದೆಹಲಿ ಗಲಭೆ | ‘ಪಿಂಜ್ರಾ ತೋಡ್’ ಸದಸ್ಯೆ ದೇವಾಂಗನಾಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್

Prasthutha|

ನವದೆಹಲಿ : ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ‘ಪಿಂಜ್ರಾ ತೋಡ್’ ಸದಸ್ಯೆ ದೇವಾಂಗನಾ ಕಲೀಟಾ ಅವರಿಗೆ ಮಂಗಳವಾರ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದ ಸಂದರ್ಭ ನಡೆದಿದ್ದ ಗಲಭೆಗೆ ಸಂಬಂಧಿಸಿ ದೇವಾಂಗನಾ ವಿರುದ್ಧ ಪ್ರಕರಣ ದಾಖಲಾಗಿತ್ತು
ಜೆಎನ್ ಯು ವಿದ್ಯಾರ್ಥಿನಿಯೂ ಆಗಿರುವ ದೇವಾಂಗನಾಗೆ ನ್ಯಾ. ಸುರೇಶ್ ಕುಮಾರ್ ಕೇತ್ ಜಾಮೀನು ಮಂಜೂರು ಮಾಡಿದ್ದು, 25,000 ವೈಯಕ್ತಿಕ ಬಾಂಡ್ ಜಾಮೀನು ನೀಡುವಂತೆ ನಿರ್ದೇಶಿಸಿದ್ದಾರೆ.

ದೇವಾಂಗನಾ ವಿರುದ್ಧದ ತನಿಖೆಯಲ್ಲಿ ಪೂರ್ವಾಗ್ರಹ ಪರಿಣಾಮ ಬೀರಕೂಡದು. ಅನಗತ್ಯ ಕಿರುಕುಳ, ಅವಮಾನ ಮತ್ತು ಸಮರ್ಥನೀಯವಲ್ಲದ ಬಂಧನದಿಂದ ಆಕೆಯನ್ನು ರಕ್ಷಿಸಬೇಕು ಎಂದೂ ಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.
ದೇವಾಂಗನಾ ನಿರ್ದಿಷ್ಟ ಸಮುದಾಯದ ಮಹಿಳೆಯರನ್ನು ಪ್ರಚೋದಿಸಿದ ಅಥವಾ ದ್ವೇಷ ಭಾಷಣ ಮಾಡಿದ ಬಗ್ಗೆ ಸಾಕ್ಷ್ಯ ಒದಗಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ಕೋರ್ಟ್ ತಿಳಿಸಿದೆ.

- Advertisement -

ದೇವಾಂಗನಾ ಮತ್ತು ಗ್ರೂಪಿನ ಇನ್ನೋರ್ವ ಸದಸ್ಯೆ ನತಾಶ ನರ್ವಾಲ್ ಅವರನ್ನು ಕಳೆದ ಮೇನಲ್ಲಿ ಬಂಧಿಸಲಾಗಿತ್ತು. ಗಲಭೆ, ಕಾನೂನು ಬಾಹಿರ ಸಭೆ ಮತ್ತು ಕೊಲೆಯತ್ನ ಸೇರಿದಂತೆ ಐಪಿಸಿಯಡಿ ಹಲವು ಆರೋಪಗಳಡಿ, ದೆಹಲಿ ಪೊಲೀಸರು ಅವರನ್ನು ಬಂಧಿಸಿದ್ದರು.

ಫೆ.24ರಂದು ದೆಹಲಿಯಲ್ಲಿ ಕೋಮು ಗಲಭೆ ಆರಂಭವಾಗಿತ್ತು. ಈ ಗಲಭೆಯಲ್ಲಿ ಸುಮಾರು 53 ಮಂದಿ ಸಾವಿಗೀಡಾಗಿದ್ದು, 200 ಮಂದಿ ಗಾಯಗೊಂಡಿದ್ದರು.

ಫೋಟೊ ಕೃಪೆ: ಇಂಡಿಯನ್ ಎಕ್ಸ್ ಪ್ರೆಸ್

- Advertisement -