ಅಗತ್ಯ ಬಿದ್ದರೆ ದೆಹಲಿ ಗಲಭೆ ಪುನರಾವರ್ತಿಸಲಿದ್ದೇವೆ: ಕಪಿಲ್ ಮಿಶ್ರಾ ವಿವಾದಾತ್ಮಕ ಹೇಳಿಕೆ

Prasthutha|

- Advertisement -

ದೆಹಲಿ ಗಲಭೆಗೆ ಒಂದು ವರ್ಷ ಪೂರ್ತಿಯಾಗುತ್ತಿದ್ದಂತೆಯೇ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಫೆಬ್ರವರಿ 23 ರಂದು ಏನು ಮಾಡಿದ್ದೇವೆಯೋ ಅಗತ್ಯ ಬಂದರೆ ಅದನ್ನೇ ಪುನರಾವರ್ತಿಸಲಿದ್ದೇವೆ ಎಂದು ಕಪಿಲ್ ಮಿಶ್ರಾ ಹೇಳಿದ್ದಾರೆ. ದೆಹಲಿ ಗಲಭೆಗಳ ಕುರಿತ ‘ಡೆಲ್ಲಿ ರಯಟ್ಸ್: ದಿ ಅನ್ಟೋಲ್ಡ್ ಸ್ಟೋರಿ’ ಪುಸ್ತಕದ ಚರ್ಚೆಯ ಸಂದರ್ಭದಲ್ಲಿ ಮಿಶ್ರಾ ಅವರು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

ಇಂಟೆಲಿಜೆನ್ಸ್ ಬ್ಯೂರೋ ಅಧಿಕಾರಿ ಅಂಕಿತ್ ಶರ್ಮಾ ಮತ್ತು ಕಾನ್ಸ್ಟೇಬಲ್ ರತನ್ ಲಾಲ್ ಅವರನ್ನು ರಕ್ಷಿಸಲು ಸಾಧ್ಯವಾಗದಿರುವುದರ ಹೊರತಾಗಿ ತನಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಕಪಿಲ್ ಮಿಶ್ರಾ ಹೇಳಿದ್ದಾರೆ. ಗಲಭೆಯಲ್ಲಿ ಇಬ್ಬರೂ ಕೊಲ್ಲಲ್ಪಟ್ಟಿದ್ದರು. ಜಿಹಾದಿಗಳ ನೇತೃತ್ವದಲ್ಲಿ ದೆಹಲಿಯಲ್ಲಿ ಗಲಭೆಗಳು ನಡೆದು ಒಂದು ವರ್ಷವಾಗಿದೆ. ಈ ರೀತಿಯ ಘಟನೆಗಳು ಇಂದೂ ನಡೆಯುತ್ತಿವೆ, ಗಣರಾಜ್ಯೋತ್ಸವದಂದು ಅದು ಸಂಭವಿಸಿದೆ. ಭಾರತ ವಿರೋಧಿಗಳ ನೇತೃತ್ವದಲ್ಲಿ ಕೆಲವು ದುಷ್ಟ ಶಕ್ತಿಗಳು ಈಗಲೂ ರಾಜಧಾನಿಯಲ್ಲಿ ಶಾಂತಿಯನ್ನು ಭಂಗಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಪಿಲ್ ಮಿಶ್ರಾ ಹೇಳಿದ್ದಾರೆ.

- Advertisement -

ಕಪಿಲ್ ಮಿಶ್ರಾ ಅವರ ದ್ವೇಷ ಭಾಷಣದಿಂದಾಗಿ ಪೌರತ್ವ ಕಾಯ್ದೆಯನ್ನು ವಿರೋಧಿಸಿ ದೆಹಲಿಯಲ್ಲಿ ನಡೆದ ಶಾಂತಿಯುತ ಪ್ರತಿಭಟನೆಯು ಗಲಭೆಯಾಗಿ ಬದಲಾಗಿತ್ತು. ಪೌರತ್ವ ವಿರೋಧಿ ಪ್ರತಿಭಟನಾಕಾರರನ್ನು ಚದುರಿಸದಿದ್ದರೆ ಅವರನ್ನು ನಾವು ನೋಡಿಕೊಳ್ಳುತ್ತೇವೆ ಎಂಬ ಕಪಿಲ್ ಮಿಶ್ರಾ ಅವರ ಹೇಳಿಕೆ ದೆಹಲಿಯಲ್ಲಿ ಗಲಭೆಗೆ ಕಾರಣವಾಗಿತ್ತು. ಕಪಿಲ್ ಮಿಶ್ರಾ ಅವರ ಹೇಳಿಕೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಮರುದಿನ ದೆಹಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಗಲಭೆಯಲ್ಲಿ ಕನಿಷ್ಠ 53 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.



Join Whatsapp