ದೆಹಲಿ ಮಹಿಳಾ ಸಿವಿಲ್ ಡಿಫೆನ್ಸ್ ಅಧಿಕಾರಿಯ ಅತ್ಯಾಚಾರ, ಹತ್ಯೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ: ಎಸ್ ಡಿಪಿಐ

Prasthutha|

ನವದೆಹಲಿ: ದೆಹಲಿಯಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಜೊತೆ ಕೆಲಸ ಮಾಡುತ್ತಿದ್ದ 21 ವರ್ಷ ಪ್ರಾಯದ ಮಹಿಳಾ ಸಿವಿಲ್ ಡಿಫೆನ್ಸ್ ಅಧಿಕಾರಿಯ ಹತ್ಯೆ ಘಟನೆ ಅತ್ಯಂತ ಭಯಾನಕ ಮತ್ತು ಆಘಾತಕಾರಿಯಾದುದು. ಈ ಕ್ರೂರ ಕೊಲೆಗಾರನಿಗೆ ಗರಿಷ್ಠ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಒತ್ತಾಯಿಸಿದ್ದಾರೆ. ಆಕೆಯ ಸ್ತನಗಳನ್ನು ಕತ್ತರಿಸಿ, ಕುತ್ತಿಗೆಯನ್ನು ಸೀಳಲಾಗಿದೆ ಮತ್ತು ಆಕೆಯ ಗುಪ್ತಾಂಗಗಳನ್ನು ವಿರೂಪಗೊಳಿಸಲಾಗಿದೆ ಎಂದು ವರದಿಯಾಗಿದೆ. ಆಕೆಯ ದೇಹದ ಹಲವು ಕಡೆಗಳಲ್ಲಿ ಇರಿದ ಗುರುತುಗಳಿವೆ ಎಂದು ಹೇಳಲಾಗಿದೆ. ಆಗಸ್ಟ್ 26 ರಂದು ಈ ಅಮಾನುಷ ಘಟನೆ ನಡೆದಿದೆ ಎಂದು ವರದಿಯಾಗಿದೆ.


ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯಲ್ಲಿ ಭ್ರಷ್ಟಾಚಾರ ಮತ್ತು ಅವ್ಯವಹಾರಗಳು ಎಗ್ಗಿಲ್ಲದೆ ನಡೆಯುತ್ತಿದ್ದವು. ಈ ಕಚೇರಿಯೊಳಗೆ ಪ್ರತಿ ದಿನ 3ರಿಂದ 4 ಲಕ್ಷ ರೂಪಾಯಿ ಭ್ರಷ್ಟಾಚಾರದ ಹಣವನ್ನು ಠೇವಣಿ ಇಡಲಾಗುತ್ತಿತ್ತು. ಇಂತಹ ಹಣವನ್ನು ಇಡಲು ರಹಸ್ಯ ಲಾಕರ್, ರಹಸ್ಯ ಬೀಗದಂತಹ ಅನೇಕ ರಹಸ್ಯ ಸಂಗತಿಗಳನ್ನು ಮರೆಮಾಚಲು ಆಕೆಯನ್ನು ಹತ್ಯೆ ಮಾಡಲಾಗಿದೆ ಎಂದು ಸಂತ್ರಸ್ತೆಯ ಕುಟುಂಬ ಆರೋಪಿಸಿದೆ.

- Advertisement -


ಆಕೆಯ ‘ಅಕ್ರಮ ಸಂಬಂಧ’ದ ಕಾರಣಕ್ಕಾಗಿ ಆಕೆಯನ್ನು ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂಬ ಶರಣಾದ ಆರೋಪಿಯ ಹೇಳಿಕೆಯನ್ನು ಮಾತ್ರ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತ ಕುಟುಂಬ ಮಾಡಿರುವ ಆರೋಪಗಳ ಬಗ್ಗೆ ಪೊಲೀಸರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಕುಟುಂಬ ಆರೋಪಿಸಿದೆ. ಕೇಂದ್ರದಲ್ಲಿ ಫ್ಯಾಶಿಸ್ಟರು ಅಧಿಕಾರ ವಹಿಸಿಕೊಂಡಾಗಿನಿಂದಲೂ ಭಾರತದಲ್ಲಿ, ವಿಶೇಷವಾಗಿ ದೆಹಲಿ ಮತ್ತು ಯುಪಿಯಲ್ಲಿ ಮಹಿಳೆಯರ ಘನತೆ, ಗೌರವ ಮತ್ತು ಸುರಕ್ಷತೆಯು ಅಪಾಯದಲ್ಲಿದೆ.

ಅತ್ಯಾಚಾರ ಮತ್ತು ಕೊಲೆ, ಕೆಲವು ಗುಂಪಿನ ಜನರ ಸವಲತ್ತು ಅಥವಾ ಹಕ್ಕು ಎಂಬಂತಾಗಿದೆ. ಏಕೆಂದರೆ ಈ ಘೋರ ಅಪರಾಧದ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುವ ಬದಲು ಸರ್ಕಾರ ಮತ್ತು ಅಧಿಕಾರಿಗಳು ಅವರಿಗೆ ಬೆಂಬಲ ನೀಡುತ್ತಿರುವುದು ಕಂಡುಬರುತ್ತಿದೆ. ಅತ್ಯಾಚಾರಿಗಳ ಬಗ್ಗೆ ಅಧಿಕಾರಿಗಳ ಈ ಆಲಸ್ಯ ಮನೋಭಾವವು ಸಮಾಜವಿರೋಧಿಗಳನ್ನು ಇಂತಹ ಕೃತ್ಯಗಳಲ್ಲಿ ಮತ್ತೆ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಫೈಝಿ ಎಚ್ಚರಿಸಿದ್ದಾರೆ.


ಪೊಲೀಸರ ನಿರ್ಲಕ್ಷ್ಯ ಹಾಗೂ ಈ ಧೋರಣೆಯನ್ನು ಎಂ.ಕೆ.ಫೈಝಿ ತೀವ್ರವಾಗಿ ಖಂಡಿಸಿದ್ದು, ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿ, ಹತ್ಯೆಯ ಹಿಂದಿನ ರಹಸ್ಯವನ್ನು ಭೇದಿಸುವಂತೆ ಅವರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

- Advertisement -