ಚೀನಾ ಫಂಡಿಂಗ್ ಆರೋಪ: ‘ನ್ಯೂಸ್ ಕ್ಲಿಕ್’ ಪತ್ರಕರ್ತರ ಮನೆ ಮೇಲೆ ದೆಹಲಿ ಪೊಲೀಸರಿಂದ ದಾಳಿ

Prasthutha|

►►‘ನ್ಯೂಸ್ ಕ್ಲಿಕ್’ ವಿರುದ್ಧ ಯುಎಪಿಎ ಪ್ರಕರಣ

- Advertisement -


ನವದೆಹಲಿ: ಚೀನಾ ಫಂಡಿಂಗ್, ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಯುಎಪಿಎ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಸ್ ಕ್ಲಿಕ್ ಸುದ್ದಿ ಪೋರ್ಟಲ್ ಗೆ ಸೇರಿದ ಹಲವಾರು ಪತ್ರಕರ್ತರ ಮನೆಗಳಿಗೆ ದಿಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.


ಅಕ್ರಮ ಹಣ ವರ್ಗಾವಣೆ ಮತ್ತು ಚೀನಾ ಪರವಾದ ವಿಷಯವನ್ನು ತನ್ನ ವೇದಿಕೆಯಲ್ಲಿ ಪ್ರಕಟಿಸಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ವಿಶೇಷ ಘಟಕ ಮಂಗಳವಾರ ನ್ಯೂಸ್ಕ್ಲಿಕ್ ಮಾಧ್ಯಮಕ್ಕೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಿದೆ.

- Advertisement -

ದೆಹಲಿ-ಎನ್ ಸಿಆರ್ ಪ್ರದೇಶದಲ್ಲಿನ ಮಾಧ್ಯಮ ಸಂಸ್ಥೆಯ ಅಧಿಕಾರಿಗಳು ಮತ್ತು ಅದರ ಉದ್ಯೋಗಿಗಳ ನಿವಾಸಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಸುದ್ದಿವಾಹಿನಿಯು ಅಮೆರಿಕದ ಬಿಲಿಯನೇರ್ ನೆವಿಲ್ಲೆ ರಾಯ್ ಸಿಂಘಮ್ ಅವರಿಂದ 38 ಕೋಟಿ ರೂಪಾಯಿಗಳನ್ನು ಪಡೆದು ಭಾರತದಲ್ಲಿ ಚೀನಾ ಪರ ಪ್ರಚಾರವನ್ನು ಮಾಡುತ್ತಿದೆ ಎಂಬ ಆರೋಪದ ಮೇಲೆ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಪ್ರಕರಣದಲ್ಲಿ ನ್ಯೂಸ್ ಕ್ಲಿಕ್ ಮೇಲೆ ಇಡಿ ತನಿಖೆ ನಡೆಸುತ್ತಿದೆ.

ಮಾಧ್ಯಮವೊಂದರ ವರದಿ ಪ್ರಕಾರ ಪೊಲೀಸರು ತನಿಖೆ ವೇಳೆ ಹಲವು ಡಿಜಿಟಲ್ ಸಾಕ್ಷ್ಯಗಳನ್ನೂ ವಶಪಡಿಸಿಕೊಂಡಿದ್ದಾರೆ. ಇವುಗಳಲ್ಲಿ ಲ್ಯಾಪ್ ಟಾಪ್, ಮೊಬೈಲ್ ಫೋನ್ ಗಳು, ಹಾರ್ಡ್ ಡಿಸ್ಕ್ ಗಳು ಕೂಡ ಸೇರಿವೆ.



Join Whatsapp