ಕುಸ್ತಿಪಟುಗಳ ಪ್ರತಿಭಟನೆ : ಬ್ರಿಜ್ ಭೂಷಣ್​ ವಿರುದ್ಧ ಇಂದು ಚಾರ್ಜ್​ಶೀಟ್ ಸಲ್ಲಿಕೆ

Prasthutha|

ಹೊಸದಿಲ್ಲಿ: ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಭಾರತೀಯ ಕುಸ್ತಿ ಫೆಡರೇಶನ್‌ನ ನಿರ್ಗಮಿತ ಅಧ್ಯಕ್ಷ ಬ್ರಿಜ್‌ಭೂಷಣ್‌ ಶರಣ್​ ಸಿಂಗ್‌ ವಿರುದ್ಧ ದೆಹಲಿ ಪೊಲೀಸರು ಗುರುವಾರ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸುವ ಸಾಧ್ಯತೆ ಇದೆ. ಇಂದು ಮಧ್ಯಾಹ್ನ 12ರ ಸುಮಾರಿಗೆ ದೆಹಲಿ ಮ್ಯಾಜಿಸ್ಪ್ರೇಟ್‌ ಕೋರ್ಚ್‌ಗೆ ಪೊಲೀಸರು ಆರೋಪ ಪಟ್ಟಿ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.

- Advertisement -

ಮೂಲಗಳ ಪ್ರಕಾರ ಈಗಾಗಲೇ ಪೊಲೀಸರು ಸುಮಾರು 180ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿದ್ದು, 120ಕ್ಕೂ ಹೆಚ್ಚು ಸಾಕ್ಷಿಗಳು ಲಭ್ಯವಾಗಿವೆ ಎಂದು ತಿಳಿದುಬಂದಿದೆ. ಜೂನ್​ 7ರಂದು ಕುಸ್ತಿಪಟುಗಳ ಜತೆ ಕೇಂದ್ರ ಕ್ರೀಡಾ ಸಚಿವ ಅನುರಾಗ್​ ಠಾಕೂರ್​ ಅವರು ಸುದೀರ್ಘ ಚರ್ಚೆ ನಡೆಸಿದ ಬಳಿಕ ಕುಸ್ತಿಪಟುಗಳು ಜೂನ್​ 15ರ ತನಕ ತಮ್ಮ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದ್ದರು. ಸಭೆಯ ಬಳಿಕ ಮಾತನಾಡಿದ್ದ ಅನುರಾಗ್​, ಜೂನ್​ 15ರೊಳಗೆ ಬ್ರಿಜ್‌ಭೂಷಣ್‌ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಗಲಿದೆ ಎಂದಿದ್ದರು. ಇದರಂತೆ ಗುರುವಾರ ಬ್ರಿಜ್‌ಭೂಷಣ್‌ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲಾಗುವುದು ಎಂದು ವರದಿಯಾಗಿದೆ.

ಒಂದೊಮ್ಮೆ ಇಂದು ಬ್ರಿಜ್​ ಭೂಷಣ್​ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಕುಸ್ತಿಪಟುಗಳು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವುದು ತಿಳಿದುಬಂದಿಲ್ಲ. ಇಂದು ಜೂನ್​ 15 ಕುಸ್ತಿಪಟುಗಳು ನೀಡಿದ ಗಡುವು ಕೂಡ ಇದಾಗಿದೆ. ಹೀಗಾಗಿ ಕುಸ್ತಿಪಟುಗಳ ಮುಂದಿನ ನಡೆ ಏನು ಎಂದು ಕಾದು ನೋಡಬೇಕಿದೆ.

- Advertisement -

ಕಳೆದ ವಾರವಷ್ಟೇ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳದ ಆರೋಪ ಪ್ರಕರಣಕ್ಕೆ ಮಹತ್ವದ ತಿರುವೊಂದು ಲಭಿಸಿತ್ತು. ದೂರು ನೀಡಿದ ಅಪ್ರಾಪ್ತ ಕುಸ್ತಿಪಟುವಿನ ತಂದೆ ಯೂ-ಟರ್ನ್​ ಹೊಡೆದಿದ್ದರು. ಬ್ರಿಜ್​ ಭೂಷಣ್​ ವಿರುದ್ಧ ಸುಳ್ಳು ಲೈಂಗಿಕ ಕಿರುಕುಳದ ದೂರು ನೀಡಿರುವುದಾಗಿ ಹೇಳಿಕೆ ನೀಡಿದ್ದರು. ಹೀಗಾಗಿ ಬ್ರಿಜ್​ ಭೂಷಣ್​ ವಿರುದ್ಧ ಚಾರ್ಜ್​ಶೀಟ್​ ದಾಖಲಾದರೂ ಅವರಿಗೆ ಶಿಕ್ಷೆಯಾಗಲಿದೆಯಾ ಎಂಬ ಕುತೂಹಲ ಮೂಡಿದೆ.

Join Whatsapp