ದೆಹಲಿ: ಪೊಲೀಸ್ ಠಾಣೆಯೊಳಗೆ ವಿಕಲಚೇತನ ಮುಸ್ಲಿಂ ಮಹಿಳೆ ಮೇಲೆ ಹಲ್ಲೆ

Prasthutha|

ನವದೆಹಲಿ: ಪೊಲೀಸ್ ಅಧಿಕಾರಿಯೊಬ್ಬರು ಮುಸ್ಲಿಮ್ ಮಹಿಳೆಗೆ ಗಂಭೀರ ಹಲ್ಲೆ ನಡೆಸಿದ ಘಟನೆ ಈಶಾನ್ಯ ದೆಹಲಿಯಿಂದ ವರದಿಯಾಗಿದೆ. ದಯಾಳ್ ಪುರ ಪೊಲೀಸ್ ಠಾಣೆಯ ಅಧಿಕಾರಿ (ಎಸ್.ಎಚ್.ಒ) ಗಿರೀಶ್ ಜೈನ್ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

- Advertisement -

ಭಾಗಶಃ ಅಂಗವಿಕಲರಾಗಿರುವ ಹಮೀದಾ ಮತ್ತು ಆಕೆಯ ಪತಿ ಮುಮ್ತಾಜ್ ಅವರು ಈಶಾನ್ಯ ದೆಹಲಿಯ ಕರವಾಲ್ ನಗರದ ನೆಹರೂ ವಿಹಾರದ ನಿವಾಸಿಗಳಾಗಿದ್ದಾರೆ. ನೆರೆಕರೆ ಮತ್ತು ಬಾಡಿಗೆದಾರರ ನಡುವೆ ಸಣ್ಣಪುಟ್ಟ ಜಗಳದ ಹಿನ್ನೆಲೆಯಲ್ಲಿ ಆಗಸ್ಟ್ 30 ರಂದು ಆಕೆಯನ್ನು ಬಂಧಿಸಲಾಗಿತ್ತು. ಬಾಡಿಗೆ ವಿಚಾರದಲ್ಲಿ ಬಂಧಿತ ಹಮೀದಾರನ್ನು ವಿಚಾರಣೆಗಾಗಿ ಬಲವಂತವಾಗಿ ಎಳೆದುಕೊಂಡು ಹೋಗಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಬಂಧನದ ನಂತರ ಕಾನ್ ಸ್ಟೇಬಲ್ ಒಬ್ಬ ಠಾಣೆಯ ಸಣ್ಣ ಕತ್ತಲೆ ಕೋಣೆಯಲ್ಲಿ ಆಕೆಯ ಕೈಗಳನ್ನು ಕಟ್ಟಿಹಾಕಿ, ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಪರಿಣಾಮ ಎರಡು ವಾರಗಳ ಕಾಲ ನನ್ನಿಂದ ನಡೆಯಲು ಸಾಧ್ಯವಾಗಿರಲಿಲ್ಲ ಎಂದು ಸಂತ್ರಸ್ತೆ ಹಮೀದಾ ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಮಹಿಳಾ ಕಾನ್ ಸ್ಟೇಬಲ್ ಉಪಸ್ಥಿತರಿರಲಿಲ್ಲವೆಂದು ತಿಳಿಸಿದ್ದಾರೆ. ಪ್ರಸಕ್ತ ಸಂತ್ರಸ್ತೆ ಜಾಮೀನಿನ ಮೇಲೆ ಬಿಡುಗಡೆಯಾಗಿರುತ್ತಾರೆ.

- Advertisement -

ಘಟನೆಗೆ ಸಂಬಂಧಿಸಿದಂತೆ ಎಸ್.ಎಚ್. ಒ ಗಿರೀಶ್ ಜೈನ್ ವಿರುದ್ಧ ಈಶಾನ್ಯ ಪೊಲೀಸ್ ಉಪ ಅಯುಕ್ತರಿಗೆ ದೂರು ಸಲ್ಲಿಸಲಾಗಿದೆ. ಮಾತ್ರವಲ್ಲ ದೂರಿನ ಪ್ರತಿಯನ್ನು ದೆಹಲಿ ಪೊಲೀಸ್ ಆಯುಕ್ತ, ರಾಜ್ಯ ಮಾನವ ಹಕ್ಕುಗಳ ಆಯೋಗ ಮತ್ತು ದೆಹಲಿ ಅಲ್ಪಸಂಖ್ಯಾತರ ಆಯೋಗಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಕುರಿತು ತನಿಖೆ ನಡೆಸುವುದಾಗಿ ಈಶಾನ್ಯ ಡಿಸಿಪಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಅಂಗವಿಕಲ ದಂಪತಿ ಮೇಲಿನ ಹಲ್ಲೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ಅಧಿಕಾರಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಝಫರುಲ್ ಇಸ್ಲಾಮ್ ಖಾನ್ ಒತ್ತಾಯಿಸಿದ್ದಾರೆ.

Join Whatsapp