ನವದೆಹಲಿ: ಅಕ್ರಮ ಹಣ ವರ್ಗಾವಣೆಯ ಆರೋಪಕ್ಕೆ ಸಂಬಂಧಿಸಿದಂತೆ ಪಿ.ಎಫ್.ಐ ಮೇಲೆ ದಾಖಲಾಗಿರುವ ಪ್ರಕರಣವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ದೆಹಲಿ ನ್ಯಾಯಾಲಯವು ಜಾರಿ ನಿರ್ದೇಶನಾಲಯ (ED) ಗೆ ನೋಟಿಸ್ ಜಾರಿಮಾಡಿದೆ.
ಪಿ.ಎಫ್.ಐ ಸಲ್ಲಿಸಿದ ಅರ್ಜಿಯ ಕುರಿತು ಫೆಬ್ರವರಿ 4, 2022 ರಂದು ಪ್ರತಿಕ್ರಿಯಿಸುವಂತೆ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾದ ಅನು ಮಲ್ಹೋತ್ರ ಅವರ ಪೀಠ ಜಾರಿ ನಿರ್ದೇಶನಾಲಯ (ED) ಗೆ ನೋಟಿಸ್ ನಲ್ಲಿ ಸೂಚಿಸಿದೆ.
ಹಿರಿಯ ವಕೀಲರಾದ ಅದಿತ್ ಪೂಜಾರಿ ಪಿ.ಎಫ್.ಐ ಪರ ನ್ಯಾಯಾಲಯದಲ್ಲಿ ವಾದಿಸಿ, ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಸಂಘಟನೆಯ ಹಲವು ಸದಸ್ಯರು ವಿಚಾರಣೆಗೆ ಬರುವಂತೆ ಸಮನ್ಸ್ ನೀಡಿದೆ. ಹಣ ವರ್ಗಾವಣೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು ಪಿ.ಎಫ್.ಐ ಸದಸ್ಯರನ್ನು ದೇಶದ್ರೋಹದ ಸುಳ್ಳಾರೋಪ ಹೊರಿಸಿ ಗುರಿಯಾಗಿಸುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಮಾತ್ರವಲ್ಲ ತನಿಖಾ ಸ್ಥಳದಲ್ಲಿ ಸಿಸಿಟಿವಿ ಯನ್ನು ಅಳವಡಿಸದೆ ಜಾರಿ ನಿರ್ದೇಶನಾಲಯ ಸುಪ್ರೀಮ್ ಕೋರ್ಟ್ ನ ಆದೇಶವನ್ನು ಉಲ್ಲಂಘಿಸಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಈ ವೇಳೆ ನ್ಯಾಯಮೂರ್ತಿ ಅನು ಮಲ್ಹೋತ್ರ ಪ್ರತಿಕ್ರಿಯಿಸುತ್ತಾ, ತನಿಖೆಯ ವೇಳೆ ಸಿಸಿಟಿವಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ಆದೇಶಿಸಿದೆ.