ನವದೆಹಲಿ: ದೆಹಲಿ ವಕ್ಫ್ ಮಂಡಳಿಗೆ ಸೇರಿದ 123 ಆಸ್ತಿಗಳನ್ನು ವಶಪಡಿಸಿಕೊಳ್ಳುವ ಕೇಂದ್ರ ಸರಕಾರದ ತೀರ್ಮಾನದ ವಿರುದ್ಧ ಪ್ರತ್ಯೇಕ ತಕರಾರು ಅರ್ಜಿ ಸಲ್ಲಿಸಲು ಸೂಚಿಸಿದ ದಿಲ್ಲಿ ಹೈಕೋರ್ಟ್, ಮಧ್ಯಂತರ ತೀರ್ಪು ನೀಡಲು ನಿರಾಕರಿಸಿತು.
ಕಳೆದ ವರ್ಷದಿಂದ ಬಾಕಿ ಉಳಿದಿರುವ ಕೇಂದ್ರ ಸರಕಾರ ವಶಪಡಿಸಿಕೊಳ್ಳುವ ಆಸ್ತಿ ವಿವಾದದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಜಸ್ಟಿಸ್ ಮನೋಜ್ ಕುಮಾರ್ ಒಹ್ರಿಯವರು ಮಧ್ಯಂತರ ಪರಿಹಾರ ನೀಡುವಂತಿಲ್ಲ ಎಂದರು.
ಈಗಾಗಲೇ ವಿಚಾರಣೆಗೆ ಆಗಸ್ಟ್ 4ನ್ನು ಗೊತ್ತು ಮಾಡಲಾಗಿದ್ದು, ದಿಲ್ಲಿ ವಕ್ಫ್ ಮಂಡಳಿಯು ಕೂಡಲೇ ತಕರಾರು ಅರ್ಜಿ ಸಲ್ಲಿಸಿ ಅದರಲ್ಲಿ ಪಟ್ಟಿಯಾಗುವಂತೆ ಮಾಡಲಿ ಎಂದು ಜಸ್ಟಿಸ್ ಹೇಳಿದರು.
ಫೆಬ್ರವರಿ 8ರಂದು ದಿಲ್ಲಿ ಕೇಂದ್ರ ಸರಕಾರದ ನಗರ ವ್ಯವಹಾರಗಳ ಇಲಾಖೆಯು ವಕ್ಫ್ ಮಂಡಳಿಯ 123 ಆಸ್ತಿಗಳನ್ನು ವಶಪಡಿಸಿಕೊಳ್ಳಲು ನೋಟಿಸ್ ನೀಡಿತ್ತು.
ದಿಲ್ಲಿ ವಕ್ಫ್ ಮಂಡಳಿ ಪರ ಹಾಜರಾದ ವಕೀಲ ರಾಹುಲ್ ಮೆಹ್ರಾ ಅವರು ಮಂಡಳಿಯ ಆಸ್ತಿ ಮುಟ್ಟುಗೋಲಿಗೆ ಕೇಂದ್ರ ಸರಕಾರಕ್ಕೆ ಅಧಿಕಾರ ಇಲ್ಲ ಎಂದರು.
“ನಿಮಗೆ ಅಂತಹ ಅಧಿಕಾರ ಇಲ್ಲದಿರುವುದರಿಂದ ನೀವು ಶಾಸನಬದ್ಧವಾಗಿ ವಶಪಡಿಸಿಕೊಳ್ಳುವುದನ್ನು ಮಾಡುವಂತಿಲ್ಲ” ಎಂದು ಮೆಹ್ರಾ ಹೇಳಿದರು.
1970, 1974, 1976 ಮತ್ತು 1984ರಲ್ಲಿ ವಿಸ್ತೃತವಾದ ಸರ್ವೆ ನಡೆದು ಅದು ವಕ್ಫ್ ಆಸ್ತಿಯೆಂದು, ಕೊನೆಗೆ ರಾಷ್ಟ್ರಪತಿಯವರ ಒಪ್ಪಿಗೆ ಮುದ್ರೆಯನ್ನೂ ಪಡೆದಿತ್ತು ಎಂದು ಅವರು ದಾಖಲೆಗಳನ್ನು ಮಂಡಿಸಿದರು.
“1911ರಿಂದ ದಿನವರೆಗೂ ಈ ಆಸ್ತಿಗಳು ವಕ್ಫ್ ಮಂಡಳಿಗೆ ಸೇರಿದವುಗಳು ಎಂಬುದಕ್ಕೆ ಸ್ಪಷ್ಟ ದಾಖಲೆಗಳು ಇವೆ. ಇದು ವಕ್ಫ್ ಮಂಡಳಿಯ ಅಧೀನದಲ್ಲಿದ್ದು, ದಿಲ್ಲಿ ವಕ್ಫ್ ಮಂಡಳಿ ಕಾನೂನಿನಂತೆ ನಿರ್ವಹಣೆ ಆಗುತ್ತಿದೆ” ಎಂದೂ ಅವರು ಹೇಳಿದರು.
ಅದು ಶಾಸನಬದ್ಧವಾಗಿ ವಕ್ಫ್ ಮಂಡಳಿಗೆ ಸೇರಿದ ಆಸ್ತಿಯಾಗಿರುವುದರಿಂದ ಕೇಂದ್ರ ಸರಕಾರಕ್ಕೆ ಅದರ ಮೇಲೆ ಯಾವ ಅಧಿಕಾರವೂ ಇಲ್ಲ ಎಂದೂ ಮೆಹ್ರಾ ಪ್ರತಿಪಾದಿಸಿದರು.
“ಯಾವುದೇ ಆಜ್ಞೆಯು ಅಧಿಕಾರಯುತವಾಗಿರಬೇಕು. ನಗರ ವ್ಯವಹಾರದ ಆಸ್ತಿ ಪಡೆಯಬೇಕೆನ್ನುವ ನೋಟೀಸಿನಲ್ಲಿ ಅದು ಯಾವುದೂ ಇಲ್ಲ” ಎಂದೂ ವಕೀಲರು ಕೋರ್ಟಿಗೆ ತೋರಿಸಿದರು.
ಕೇಂದ್ರ ಸರಕಾರದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರು ವಕ್ಫ್ ಮಂಡಳಿ ಮಾಡಿಕೊಂಡಿರುವ ಮನವಿಯಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದರು.
ಮಂಡಳಿಯ ಅರ್ಜಿಯು ಸ್ಟೇ ಆರ್ಡರ್ ಕೇಳಿದೆ. ಅದು ಕೋರ್ಟಿನಿಂದ ಮತ್ತು ಗಮನಿಸಲು ರಚಿಸಿದ ಇಬ್ಬರು ಸದಸ್ಯರ ಸಮಿತಿಯಿಂದಲೂ ತಿರಸ್ಕೃತವಾಗಿದೆ. ಈಗ ಮರು ಕೋರಿಕೆ ಅರ್ಜಿಯೂ ವಜಾ ಆಗುತ್ತಿದೆ ಎಂದರು.
“ಒಮ್ಮೆ ಸಮಿತಿ ನೀಡಿದ ವರದಿಯನ್ನು ವಕ್ಫ್ ಮಂಡಳಿಯ ಅರ್ಜಿಯು ಚಾಲೆಂಜ್ ಮಾಡಿದೆ. ಅದನ್ನು ನಾವು ನೋಡಿಕೊಳ್ಳುತ್ತೇವೆ. ಈ ಅರ್ಜಿಯಿಂದ ಅದೆಲ್ಲ ಸಾಧ್ಯವಿಲ್ಲ. ವಸ್ತುನಿಷ್ಠವಾದ ಅರ್ಜಿ ಸಲ್ಲಿಸಬೇಕಾದ ಅಗತ್ಯವಿದೆ” ಎಂದು ಶರ್ಮಾ ಹೇಳಿದರು.