ನವದೆಹಲಿ: ದೆಹಲಿ ಅಬಕಾರಿ ನೀತಿ 2021-22 ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ದೆಹಲಿ, ಚಂಡೀಗಢ ಮತ್ತು ಹೈದರಾಬಾದ್ ನ 35 ಸ್ಥಳಗಳಲ್ಲಿ ಶೋಧ ನಡೆಸಿದೆ.
ಈ ಪ್ರಕರಣದಲ್ಲಿ ದೆಹಲಿಯ ಜೋರ್ ಬಾಗ್ ಮೂಲದ ಮದ್ಯ ವಿತರಕ ಇಂಡೋಸ್ಪಿರಿಟ್ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕ ಸಮೀರ್ ಮಹೇಂದ್ರು ಅವರನ್ನು ಕೇಂದ್ರ ತನಿಖಾ ಸಂಸ್ಥೆ ಬಂಧಿಸಿದ ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.
ಈಗ ರದ್ದಾದ ಅಬಕಾರಿ ನೀತಿಯಡಿ ರಾಷ್ಟ್ರ ರಾಜಧಾನಿಯಲ್ಲಿ ಮದ್ಯ ವ್ಯಾಪಾರದಲ್ಲಿ ತೊಡಗಿರುವ ಮಾರಾಟಗಾರರು, ವಿತರಕರು ಮತ್ತು ಮಧ್ಯವರ್ತಿಗಳಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಈ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಅಂದಿನ ಅಬಕಾರಿ ಆಯುಕ್ತ ಅರ್ವಾ ಗೋಪಿ ಕೃಷ್ಣ, ಜಿಲ್ಲಾಧಿಕಾರಿ ಆನಂದ್ ತಿವಾರಿ ಮತ್ತು ಸಹಾಯಕ ಆಯುಕ್ತ ಪಂಕಜ್ ಭಟ್ನಾಗರ್ ಈ ಪ್ರಕರಣದ ಆರೋಪಿಗಳಾಗಿದ್ದಾರೆ.