ದೆಹಲಿ ಅಬಕಾರಿ ನೀತಿ ಪ್ರಕರಣ: ತೆಲಂಗಾಣ ಸಿಎಂ ಕೆಸಿಆರ್ ಪುತ್ರಿ ಕವಿತಾಗೆ ಇಡಿ ಸಮನ್ಸ್

Prasthutha|

ನವದೆಹಲಿ: ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.

- Advertisement -

ಭಾರತ ರಾಷ್ಟ್ರ ಸಮಿತಿ (ಬಿಆರ್’ಎಸ್) ಪಕ್ಷದ ಎಂಎಲ್ಸಿಯಾಗಿರುವ ಕವಿತಾ (44) ಅವರಿಗೆ ಮಾರ್ಚ್ 9 ರಂದು ರಾಷ್ಟ್ರ ರಾಜಧಾನಿಯಲ್ಲಿರುವ ಇ.ಡಿ. ಕಚೇರಿಗೆ ಹಾಜರಾಗುವಂತೆ ನೋಟಿಸ್’ನಲ್ಲಿ ಸೂಚಿಸಲಾಗಿದೆ.

ಸೋಮವಾರ ಜಾರಿ ನಿರ್ದೇಶನಾಲಯ ಬಂಧಿಸಿರುವ ‘ಸೌತ್ ಗ್ರೂಪ್’ನ  ಮುಖ್ಯಸ್ಥ ಎನ್ನಲಾದ ಹೈದರಾಬಾದ್ ಮೂಲದ ಉದ್ಯಮಿ ಅರುಣ್ ರಾಮಚಂದ್ರ ಪಿಳ್ಳೈ ಅವರೊಂದಿಗೆ ಮುಖಾಮುಖಿಯಾಗಿಸಿ ಪ್ರಶ್ನೆಗಳನ್ನು ಕೇಳುವ ಉದ್ದೇಶದಿಂದ ಕವಿತಾರನ್ನು ಕರೆಸಲಾಗುತ್ತಿದೆ.

- Advertisement -

ಕವಿತಾ ಮತ್ತು ಇತರರೊಂದಿಗೆ ಸಂಪರ್ಕ ಹೊಂದಿರುವ ಪಿಳ್ಳೈ ಮದ್ಯ ಕಂಪನಿಯ “ದಕ್ಷಿಣ ವಿಭಾಗದ ಮುಖ್ಯಸ್ಥ” ಎಂದು ಜಾರಿ ನಿರ್ದೇಶನಾಲಯ (ಇಡಿ) ಈ ಹಿಂದೆ ಹೇಳಿತ್ತು.

ದಕ್ಷಿಣ ಗುಂಪಿನಲ್ಲಿ ಶರತ್ ರೆಡ್ಡಿ (ಅರಬಿಂದೋ ಫಾರ್ಮಾ ಪ್ರವರ್ತಕ), ಮಾಗುಂಟ ಶ್ರೀನಿವಾಸುಲು ರೆಡ್ಡಿ (ಒಂಗೋಲ್ ಲೋಕಸಭಾ ಕ್ಷೇತ್ರದ ವೈಎಸ್’ಆರ್ ಕಾಂಗ್ರೆಸ್ ಸಂಸದ), ಕವಿತಾ ಮತ್ತು ಇತರರು ಇದ್ದಾರೆ ಎನ್ನಲಾಗಿದೆ.

ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಪರಿಚಯಿಸುವಂತೆ ಒತ್ತಾಯಿಸಿ ಮಾರ್ಚ್ 10 ರಂದು ಜಂತರ್ ಮಂತರ್’ನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲು ದೆಹಲಿಯಲ್ಲಿರುವುದಾಗಿ ಕವಿತಾ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಬಿಆರ್’ಎಸ್ ನಾಯಕನನ್ನು ಈ ಹಿಂದೆ ಕೇಂದ್ರ ತನಿಖಾ ದಳ (ಸಿಬಿಐ) ಪ್ರಶ್ನಿಸಿತ್ತು.

Join Whatsapp