ನವದೆಹಲಿ: ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಸೋಮವಾರ ಆಮ್ ಆದ್ಮಿ ಪಕ್ಷದ ವಕ್ತಾರ ವಿಜಯ್ ನಾಯರ್ ಮತ್ತು ಉದ್ಯಮಿ ಅಭಿಷೇಕ್ ಬೋನಪಲ್ಲಿ ಎಂಬವರನ್ನು ಬಂಧಿಸಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಅವರಿಬ್ಬರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮೊದಲು ಈ ಇಬ್ಬರನ್ನೂ ಸಿಬಿಐ ವಿಚಾರಣೆಗೊಳಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ನಂತರ ಅವರ ಜಾಮೀನು ಅರ್ಜಿಯ ವಾದವನ್ನು ಆಲಿಸಲು ನ್ಯಾಯಾಲಯವು ಸಜ್ಜಾಗಿತ್ತು.
ದೆಹಲಿಯ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನ ಪ್ರಕರಣದಲ್ಲಿ ಸಿಬಿಐ ಅಭಿಷೇಕ್ ಬೋನಪಲ್ಲಿಯನ್ನು ಬಂಧಿಸಿತ್ತು.
ಹೈದರಾಬಾದಿನ ಪ್ರಮುಖ ಉದ್ಯಮಿ ಬೋನಪಲ್ಲಿ ಅವರ ಹೆಸರು ತನಿಖೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿತ್ತು. ತನಿಖೆಗೆ ಬರುವಂತೆ ಅವರಿಗೆ ಸೂಚಿಸಲಾಯಿತು. ಆದರೆ ತನಿಖಾ ಸಂಸ್ಥೆಯೊಂದಿಗೆ ಅವರು ಸಹಕರಿಸಲಿಲ್ಲ ಮತ್ತು ತನಿಖಾ ಸಂಸ್ಥೆಯನ್ನು ತಪ್ಪುದಾರಿಗೆಳೆಯಲು ಪ್ರಯತ್ನಿಸಿದರು ಎಂದು ಆರೋಪಿಸಲಾಗಿದೆ.