‘ಪ್ರಸ್ತುತ ಮತ್ತು ಭವಿಷ್ಯದಲ್ಲಿ ಶಾಂತಿ ಕದಡಲು ಹಿಂದಿನ ತಪ್ಪುಗಳು ಆಧಾರವಾಗಬಾರದು’
ನವದೆಹಲಿ: ದಿಲ್ಲಿಯ ಐತಿಹಾಸಿಕ ಕುತುಬ್ ಮಿನಾರ್ ಆವರಣದಲ್ಲಿ ದೇವಸ್ಥಾನಗಳನ್ನು ಧ್ವಂಸಗೊಳಿಸಿ ಕುವ್ವತುಲ್ ಇಸ್ಲಾಂ ಮಸೀದಿ ನಿರ್ಮಿಸಲಾಗಿದೆ. ಹೀಗಾಗಿ ಈ ಸ್ಥಳದಲ್ಲಿ ದೇಗುಲವನ್ನು ಮರುಸ್ಥಾಪಿಸಿ ಪೂಜೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿಯ ಸಾಕೇತ್ ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದೆ.
ವಕೀಲರಾದ ಹರಿಶಂಕರ್ ಜೈನ್ ಮತ್ತು ರಂಜನಾ ಅಗ್ನಿಹೋತ್ರಿ ಸಲ್ಲಿಸಿದ್ದ ಮೊಕದ್ದಮೆಯನ್ನು ತಿರಸ್ಕರಿಸಿದ ಸಿವಿಲ್ ನ್ಯಾಯಾಧೀಶೆ ನೇಹಾ ಶರ್ಮಾ, ಪ್ರಸ್ತುತ ಮತ್ತು ಭವಿಷ್ಯದಲ್ಲಿ ಶಾಂತಿ ಕದಡಲು ಹಿಂದಿನ ತಪ್ಪುಗಳು ಆಧಾರವಾಗಬಾರದು ಎಂದು ಹೇಳಿದ್ದಾರೆ
ಅಯೋಧ್ಯೆ ಭೂ ವಿವಾದ ಪ್ರಕರಣ ಉಲ್ಲೇಖಿಸಿದ ನ್ಯಾಯಾಧೀಶರು, ಕುತುಬ್ ಮಿನಾರ್ ಸಂಕೀರ್ಣದೊಳಗೆ ಹಿಂದೂ ಮತ್ತು ಜೈನ ದೇವತೆಗಳ ಜೀರ್ಣೋದ್ಧಾರ ಮತ್ತು ಪೂಜಿಸುವ ಹಕ್ಕಿನ ಸಿವಿಲ್ ಮೊಕದ್ದಮೆಯನ್ನು ತಿರಸ್ಕರಿಸಿದೆ. ಇತಿಹಾಸದಲ್ಲಿ ತಪ್ಪುಗಳಾಗಿದೆ ಎಂಬುದನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ. ಆದರೆ ಆ ತಪ್ಪುಗಳು ನಮ್ಮ ಪ್ರಸ್ತುತ ಮತ್ತು ಭವಿಷ್ಯದ ಶಾಂತಿಯನ್ನು ಕದಡಲು ಆಧಾರವಾಗುವುದಿಲ್ಲ. ಇತಿಹಾಸವನ್ನು ಒಟ್ಟಾರೆಯಾಗಿ ಒಪ್ಪಿಕೊಳ್ಳಬೇಕು. ಜನರು ಕಾನೂನನ್ನು ತಮ್ಮ ಕೈಗೆತ್ತಿಕೊಳ್ಳುವ ಮೂಲಕ ಐತಿಹಾಸಿಕ ತಪ್ಪುಗಳನ್ನು ಸರಿಪಡಿಸಲು ಸಾಧ್ಯವಿಲ್ಲ. ಸಂರಕ್ಷಿತ ಸ್ಮಾರಕವೆಂದು ಘೋಷಿಸಿ ಸರ್ಕಾರದ ಒಡೆತನದಲ್ಲಿದ್ದರೆ, ಆ ಸ್ಥಳವನ್ನು ಧಾರ್ಮಿಕ ಸೇವೆಗಳಿಗೆ ವಾಸ್ತವವಾಗಿ ಮತ್ತು ಸಕ್ರಿಯವಾಗಿ ಬಳಸಬೇಕು ಎಂದು ಫಿರ್ಯಾದಿಗಳು ಒತ್ತಾಯಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ಕುತುಬ್ ಮಿನಾರ್ ಇರುವ ಸಂಕೀರ್ಣದೊಳಗೆ ಈ ಹಿಂದೆ ಜೈನ ತೀರ್ಥಂಕರ ಭಗವಾನ್ ರಿಷಭ್ ದೇವ್ ಮತ್ತು ಪ್ರಧಾನ ದೇವತೆಗಳಾದ ವಿಷ್ಣು, ಗಣೇಶ, ಶಿವ,ಗೌರಿ, ಸೂರ್ಯದೇವ, ಹನುಮನ ಮಂದಿರ ಸೇರಿದಂತೆ 27ಕ್ಕೂ ಹೆಚ್ಚು ದೇಗುಲಗಳಿದ್ದವು. ಇವುಗಳನ್ನು ಕುತುಬ್ ದಿನ್ ಐಬಕ್ ಧ್ವಂಸಗೊಳಿಸಿ ಅಲ್ಲಿ ಮಿನಾರ್ ಸ್ಥಾಪಿಸಿದ್ದಾನೆ. ಹೀಗಾಗಿ ಆ ಜಾಗದಲ್ಲಿ ದೇಗುಲವನ್ನು ಮರುಸ್ಥಾಪಿಸಿ ಅಲ್ಲಿ ಪೂಜೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಅರ್ಜಿಯಲ್ಲಿ ವಕೀಲರಾದ ಹರಿಶಂಕರ್ ಜೈನ್ ಮತ್ತು ರಂಜನಾ ಅಗ್ನಿಹೋತ್ರಿ ಉಲ್ಲೇಖಿಸಿದ್ದಾರೆ. ಅಲ್ಲದೇ ದೇಗುಲದ ದುರಸ್ಥಿ ಕೆಲಸ ಮತ್ತು ನಿರ್ಮಾಣ ಕಾಮಗಾರಿಗಳಲ್ಲಿ ಹಾಗೂ ಪೂಜೆ, ದರ್ಶನದ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ಭಾರತೀಯ ಪ್ರಾಚ್ಯವಸ್ತು ಇಲಾಖೆ ಮಧ್ಯ ಪ್ರವೇಶಿಸದಂತೆ ಶಾಶ್ವತವಾಗಿ ತಡೆಯೊಡ್ಡಬೇಕು. ಜೊತೆಗೆ ಕುತುಬ್ ಸಂಕೀರ್ಣದೊಳಗೆ ಇರುವ ಈ ದೇಗುಲಗಳಿಗೆ ಟ್ರಸ್ಟ್ ಸ್ಥಾಪಿಸಿ ದೇವಾಲಯದ ನಿರ್ವಹಣೆ ಮತ್ತು ಆಡಳಿತವನ್ನು ಟ್ರಸ್ಟ್‌ಗೆ ವರ್ಗಾಯಿಸಬೇಕೆಂದು ಮನವಿಯಲ್ಲಿ ಕೋರಲಾಗಿದೆ. ಇದೀಗ ಈ ವಿಚಾರ ಸಾಕಷ್ಟು ಪರ ವಿರೋಧ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಈ ಅರ್ಜಿಯ ವಿಚಾರಣೆಯನ್ನು ನ್ಯಾಯಾಧೀಶೆ ನೇಹಾ ಶರ್ಮಾ ಅವರು ಡಿಸೆಂಬರ್ 24ಕ್ಕೆ ಮುಂದೂಡಿದ್ದಾರೆ.