ಮಹಿಳಾ ಕುಸ್ತಿಪಟುವಿನ ಭದ್ರತೆ ತಕ್ಷಣ ಮರುಸ್ಥಾಪಿಸಲು ದೆಹಲಿ ನ್ಯಾಯಾಲಯ ಆದೇಶ

Prasthutha|

ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್(ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿರುವ ಮಹಿಳಾ ಕುಸ್ತಿಪಟುವಿನ ಭದ್ರತೆಯನ್ನು ತಕ್ಷಣ ಮರುಸ್ಥಾಪಿಸುವಂತೆ ದೆಹಲಿ ನ್ಯಾಯಾಲಯ ನಗರ ಪೊಲೀಸರಿಗೆ ನಿರ್ದೇಶನ ನೀಡಿದೆ.

- Advertisement -

ಬ್ರಿಜ್ ಭೂಷಣ್ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಾಕ್ಷಿ ಹೇಳಲು ಹೊರಟಿದ್ದ ಮಹಿಳಾ ಕುಸ್ತಿಪಟುಗಳ ಭದ್ರತೆಯನ್ನು ದೆಹಲಿ ಪೊಲೀಸರು ಹಿಂಪಡೆದಿದ್ದಾರೆ ಎಂದು ಕುಸ್ತಿಪಟು ವಿನೇಶ್ ಪೋಗಟ್ X ನಲ್ಲಿ ಪೋಸ್ಟ್ ಮಾಡಿದ್ದರು. ಇದರ ಬೆನ್ನಲ್ಲೇ ತಮ್ಮ ಭದ್ರತೆಯನ್ನು ಹಠಾತ್ ಹಿಂಪಡೆಯಲಾಗಿದೆ ಎಂದು ಆರೋಪಿಸಿ ಮೂವರು ಕುಸ್ತಿಪಟುಗಳ ಪರವಾಗಿ ಹಿರಿಯ ವಕೀಲೆ ರೆಬೆಕಾ ಜಾನ್ ಅವರು ಅರ್ಜಿ ಸಲ್ಲಿಸಿದ್ದರು.

ರೌಸ್ ಅವೆನ್ಯೂ ನ್ಯಾಯಾಲಯದ ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಪ್ರಿಯಾಂಕಾ ರಜಪೂತ್ ಈ ಸಂಬಂಧವಾಗಿ ಆದೇಶವನ್ನು ಹೊರಡಿಸಿದ್ದು, ಬ್ರಿಜ್ ಭೂಷಣ್ ವಿರುದ್ಧದ ಪ್ರಕರಣದಲ್ಲಿ ಅವರು ಹೇಳಿಕೆ ನೀಡಲು ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗಲಿರುವ ಕಾರಣ ಕುಸ್ತಿಪಟುವಿನ ಸುರಕ್ಷತೆಯ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಭದ್ರತೆ ಹಿಂತೆಗೆತದ ಹಿಂದಿನ ಕಾರಣಗಳ ಬಗ್ಗೆ ಶುಕ್ರವಾರದೊಳಗೆ ವಿವರವಾದ ವಿವರಣೆಯನ್ನು ನೀಡುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.

- Advertisement -

ಮಧ್ಯಂತರ ಕ್ರಮವಾಗಿ, ಸಾಕ್ಷಿಗಳ ಪಟ್ಟಿಯಲ್ಲಿ “ಸಂತ್ರಸ್ತೆ ಸಂಖ್ಯೆ 4” ಎಂದು ಗುರುತಿಸಲಾದ ದೂರುದಾರರಿಗೆ “ತಕ್ಷಣ ಮತ್ತು ಸೂಕ್ತವಾಗಿ” ಭದ್ರತೆಯನ್ನು ಮರುಸ್ಥಾಪಿಸುವಂತೆ ಮ್ಯಾಜಿಸ್ಟ್ರೇಟ್ ಪ್ರಿಯಾಂಕಾ ಪೊಲೀಸರಿಗೆ ಆದೇಶಿದ್ದಾರೆ.



Join Whatsapp