ನವದೆಹಲಿ:ಇಲ್ಲಿನ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಐಪಿಎಲ್ 17ನೇ ಆವೃತ್ತಿಯ 64ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಲಕ್ನೊ ಸೂಪರ್ ಜೈಂಟ್ಸ್ ವಿರುದ್ಧ 19 ರ್‌ಗಳ ಗೆಲುವು ಸಾಧಿಸಿದೆ.
ಟಾಸ್ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡ ಮೊದಲ ಓವರ್‌ನಲ್ಲೇ ಜೇಕ್ ಫ್ರೇಸರ್ ವಿಕೆಟ್ ಕಳೆದುಕೊಂಡಿತು. ಆದರೆ ಅಭಿಷೇಕ್ ಪೊರೆಲ್ 33 ಎಸೆತಗಳಲ್ಲಿ 55 ರನ್ ಗಳಿಸಿ ತಂಡಕ್ಕೆ ಆಸರೆಯಾದರು.
ಶೈ ಹೋಪ್ 27 ಎಸೆತಗಳಲ್ಲಿ 38 ರನ್ ಗಳಿಸಿದರೆ, ನಾಯಕ ಪಂತ್ 33 ರನ್ ಗಳಿಸಿದರು. ಟ್ರಿಸ್ಟನ್ ಸ್ಟಬ್ಸ್ 25 ಎಸೆತಗಳಲ್ಲಿ ಅಜೇಯ 57 ರನ್ ಗಳಿಸುವ ಮೂಲಕ ತಂಡ 200 ರನ್ ಗಡಿದಾಟಲು ಸಹಾಯ ಮಾಡಿದರು. ಕೊನೆಗೆ ಲಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 208 ರನ್ ಕಲೆಹಾಕಿತು.
ಪ್ರತಿಯಾಗಿ ಬ್ಯಾಟ್ ಮಾಡಿದ ಲಕ್ನೊ ತಂಡ ಬ್ಯಾಟಿಂಗ್ ವೈಫಲ್ಯ ಎದುರಿಸಿ ಓವರ್ಗಳು ಮುಕ್ತಾಯಗೊಂಡಾಗ 9 ವಿಕೆಟ್ ನಷ್ಟಕ್ಕೆ 189 ರನ್ ಬಾರಿಸಿ ಸೋಲೊಪ್ಪಿಕೊಂಡಿತು.
ಲಕ್ನೋ ಸೂಪರ್ ಜೈಂಟ್ಸ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ಕೆಎಲ್ ರಾಹುಲ್ 5 ರನ್, ಮಾರ್ಕಸ್ ಸ್ಟೊಯಿನಿಸ್ 5 ರನ್, ಕ್ವಿಂಟನ್ ಡಿ ಕಾಕ್ 12 ರನ್ ಗಳಿಸಿ ಔಟಾದರೆ, ದೀಪಕ್ ಹೂಡಾ ಸೊನ್ನೆಗೆ ವಿಕೆಟ್ ಒಪ್ಪಿಸಿದರು.
ನಿಕೋಲಸ್ ಪೂರನ್ 27 ಎಸೆತಗಳಲ್ಲಿ 61 ರನ್ ಗಳಿಸಿ ಹೋರಾಟ ಕೊಟ್ಟು, ಮುಖೇಶ್ ಕುಮಾರ್ ಬೌಲಿಂಗ್‌ನಲ್ಲಿ ಔಟಾದರು. ಅರ್ಷದ್ ಖಾನ್ ಕೊನೆಯಲ್ಲಿ 33 ಎಸೆತಗಳಲ್ಲಿ ಅಜೇಯ 58 ರನ್ ಗಳಿಸುವ ಮೂಲಕ ಎಲ್‌ಎಸ್‌ಜಿ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದರೂ, ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು.
ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಬೇಕಾದರೆ ಈ ಪಂದ್ಯವನ್ನು ಕೆ ಎಲ್ ರಾಹುಲ್ ನೇತೃತ್ವದ ಲಕ್ನೋ ತಂಡ ಗೆಲ್ಲಲೇಬೇಕಿತ್ತು. ಡೆಲ್ಲಿ ಕ್ಯಾಪಿಟಲ್ಸ್ ಜಯಗಳಿಸಿದ್ದರೂ ಲಾಭವಾದದ್ದು ಮಾತ್ರ ಆರ್‌ಸಿಬಿಗೆ. ಜೊತೆಗೆ, ಲಕ್ನೋ ಸೋಲುವುದರೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡ ಪ್ಲೇ-ಆಫ್ ಪ್ರವೇಶಿಸಿದೆ.