ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದ ವೇಳೆ ಕ್ರಿಕೆಟ್ ಕಿಟ್ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ನಗರ ಪೊಲೀಸರ ಸಹಕಾರದೊಂದಿಗೆ ದೆಹಲಿ ಪೊಲೀಸರು ಬಂಧಿಸಿ ಕ್ರಿಕೆಟ್ ಕಿಟ್ ಜಪ್ತಿ ಮಾಡಿದ್ದಾರೆ.
ಕಳೆದ 10 ದಿನಗಳ ಹಿಂದೆ ದೆಹಲಿ ಹಾಗೂ ಆರ್ ಸಿಬಿ ಪಂದ್ಯದ ವೇಳೆ ಡೆಲ್ಲಿ ಕ್ಯಾಪಿಟಲ್ ತಂಡದ ಕ್ರಿಕೆಟ್ ಕಿಟ್ ಕಳವಾಗಿತ್ತು. ಈ ಬಗ್ಗೆ ದೆಹಲಿ ಪೊಲೀಸರಿಗೆ ದೆಹಲಿ ತಂಡದ ಮ್ಯಾನೇಜ್ಮೆಂಟ್ ದೂರು ನೀಡಿತ್ತು. ಈ ಸಂಬಂಧ ದೆಹಲಿ ಪೊಲೀಸರು ಎಫ್’ಐಆರ್ ದಾಖಲಿಸಿ ತನಿಖೆಯನ್ನು ಕೈಗೊಂಡ ಸಂದರ್ಭದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಕಳವಾಗಿರುವ ಅನುಮಾನವಿದ್ದರಿಂದ ಡೆಲ್ಲಿ ಕ್ಯಾಪಿಟಲ್ ತಂಡ ಈ ಬಗ್ಗೆ ಬೆಂಗಳೂರು ಪೊಲೀಸರನ್ನು ಸಂಪರ್ಕ ಮಾಡಿತ್ತು.
ತೀವ್ರ ತನಿಖೆ ನಡೆಸಿ, ಕೊನೆಗೂ ಡೆಲ್ಲಿ ಕ್ಯಾಪಿಟಲ್ ತಂಡದ ಕ್ರಿಕೆಟ್ ಕಿಟ್ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ ಎಂದು ಡಿಸಿಪಿ ಶ್ರೀನಿವಾಸ ಗೌಡ ತಿಳಿಸಿದ್ದಾರೆ.
ಆರೋಪಿಗಳಿಂದ ಕಳವಾಗಿದ್ದ 17 ಬ್ಯಾಟ್ಗಳು, ಗ್ಲೌಸ್, ಹೆಲ್ಮೇಟ್, ಪ್ಯಾಡ್ ಸೇರಿ ಹಲವು ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಡೆಲ್ಲಿ ಕ್ಯಾಪಿಟಲ್ ತಂಡದ ನಾಯಕ ಡೇವಿಡ್ ವಾರ್ನರ್ ಕಳವಾಗಿದ್ದ ತಮ್ಮ ತಂಡದ ಕ್ರಿಕೆಟ್ ಕಿಟ್ ಅನ್ನು ಪತ್ತೆ ಮಾಡಿದ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.