ನವದೆಹಲಿ: ಹೆಚ್ಚಿನ ಸಂಖ್ಯೆಯ ಪಂಜಾಬ್ ಪೊಲೀಸರು ನಮ್ಮ ಮನೆಗೆ ದಾಳಿ ನಡೆಸಿದ್ದು, ನನ್ನನ್ನು ಬಂಧಿಸಿ ಭಯೋತ್ಪಾದಕನಂತೆ ನಡೆಸಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ಆರೋಪಿಸಿದ್ದಾರೆ.
ಇಂದು ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಗ್ಗಾ, ತಮ್ಮ ಬಂಧನ ನಂತರದ ಪರಿಸ್ಥಿತಿತ ಕುರಿತು ವಿವರಿಸಿದ್ದಾರೆ.
ನಮ್ಮ ಮನೆಗೆ ದಾಳಿ ಮಾಡಿದ ಪೊಲೀಸರು ಯಾವುದೇ ವಾರಂಟ್ ಹೊಂದಿರಲಿಲ್ಲ. 8ಕ್ಕೂ ಅಧಿಕ ಮಂದಿ ಪೊಲೀಸರು ನನ್ನನ್ನು ಹಿಡಿದಿದ್ದು, ಪೇಟಾ ಧರಿಸಲೂ ನನಗೆ ಅವಕಾಶ ನೀಡಿರಲಿಲ್ಲ. ಕನಿಷ್ಠ ಪಕ್ಷ ಚಪ್ಪಲಿಯನ್ನಾದರೂ ಧರಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದೇನೆ. ಇದಕ್ಕೂ ಪೊಲೀಸರು ಅವಕಾಶ ನೀಡಿರಲಿಲ್ಲ. ಪೊಲೀಸರು ಈ ವೇಳೆ ವಾಹನದೊಳಗೆ ನನ್ನನ್ನು ಎಸೆದಿದ್ದರು. ನನ್ನನ್ನು ಬಂಧಿಸುವ ಕುರಿತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ಈ ಸಂದರ್ಭದಲ್ಲಿ 50ಕ್ಕೂ ಹೆಚ್ಚಿನ ಪೊಲೀಸರು ಭಾಗಿಯಾಗಿದ್ದರು ಎಂದು ಬಗ್ಗಾ ತಿಳಿಸಿದ್ದಾರೆ.
ಈ ಹಿಂದೆಯೂ ನನ್ನನ್ನು ಬಂಧಿಸುವ ಸಲುವಾಗಿ ದೆಹಲಿಗೆ ಬಂದಿದ್ದು, ನಾನು ಲಖನೌನಲ್ಲಿದ್ದ ಕಾರಣ ಬಂಧನ ಸಾಧ್ಯವಾಗಿರಲಿಲ್ಲ. ಈ ವೇಳೆ ಸ್ಥಳೀಯ ಪೊಲೀಸರಿಗೆ ಅವರು ಮಾಹಿತಿ ನೀಡಿರಲಿಲ್ಲ ಎಂದು ತಿಳಿಸಿದ್ದಾರೆ.
ಇದೀಗ ಪಂಜಾಬ್ ಪೊಲೀಸರು ನನ್ನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಬೆನ್ನು ಮತ್ತು ಭುಜಕ್ಕೆ ಗಾಯವಾಗಿರುವುದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ ಎಂದು ಅವರು ಆರೋಪಿಸಿದ್ದಾರೆ.