ಹೊಸದಿಲ್ಲಿ: ಈಶಾನ್ಯ ದೆಹಲಿಯ ಎಂಸಿಡಿ ಶಾಲೆಯಲ್ಲಿ ಇಬ್ಬರು ಹುಡುಗಿಯರನ್ನು ಕಿರುಕುಳ ನೀಡಿದ ಆರೋಪದ ಮೇಲೆ 40 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿಯರು ನೀಡಿದ ವಿವರಗಳ ಪ್ರಕಾರ ಪೊಲೀಸರು ವ್ಯಕ್ತಿಯ ರೇಖಾಚಿತ್ರವನ್ನು ತಯಾರಿಸಿ ಆ ಮೂಲಕ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಎಪ್ರಿಲ್ 30 ರಂದು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಶಾಲೆಯಲ್ಲಿ ಬೆಳಗ್ಗೆ ಅಸೆಂಬ್ಲಿ ಮುಗಿದ ಬಳಿಕ ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ಕಾಯುತ್ತಿರುವಾಗ ಅಪರಿಚಿತ ವ್ಯಕ್ತಿಯೊಬ್ಬ ತರಗತಿಗೆ ಪ್ರವೇಶಿಸಿದ್ದ. ಈತ ಇಬ್ಬರು ಹುಡುಗಿಯರ ಬಟ್ಟೆ ತೆಗೆದು, ನಂತರ ತರಗತಿಯ ಬಾಗಿಲು ಮುಚ್ಚಿ ವಿದ್ಯಾರ್ಥಿಗಳ ಮುಂದೆ ಮೂತ್ರ ವಿಸರ್ಜನೆ ಮಾಡಿದ್ದ. ವಿದ್ಯಾರ್ಥಿಗಳು ಘಟನೆಯ ಬಗ್ಗೆ ಶಿಕ್ಷಕರು ಮತ್ತು ಪ್ರಾಂಶುಪಾಲರಿಗೆ ತಿಳಿಸಿದಾಗ, ಅವರು ಮೌನವಾಗಿರಿ ಮತ್ತು ಅದನ್ನು ಮರೆತುಬಿಡಿ ಎಂದು ಹೇಳಿದರು ಎಂದು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲ್ಲಿವಾಲ್ ತಮ್ಮ ದೂರಿನಲ್ಲಿ ತಿಳಿಸಿದ್ದರು.
ಈ ಕುರಿತು ಮಾತನಾಡಿರುವ ದೆಹಲಿಯ ಡೆಪ್ಯೂಟಿ ಸ್ಪೀಕರ್ ರಾಖಿ ಬಿರ್ಲಾ, ಅಪರಿಚಿತ ವ್ಯಕ್ತಿಯೊಬ್ಬರು ಶಾಲಾ ಆವರಣಕ್ಕೆ ನುಗ್ಗಿ ಶಾಲಾ ಅವಧಿಯಲ್ಲಿ ಇಂತಹ ಕೃತ್ಯ ನಡೆಸಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. 3-4 ದಿನಗಳವರೆಗೆ ಎಂಸಿಡಿಯಾಗಲೀ ಅಥವಾ ದೆಹಲಿ ಪೊಲೀಸರು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ದೆಹಲಿ ಮಹಿಳಾ ಆಯೋಗವು ಅವರಿಗೆ ನೋಟಿಸ್ ನೀಡಿದ ನಂತರ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ