ದೆಹಲಿ: ಪಟಾಕಿ ಸಿಡಿಸಿದರೆ 6 ತಿಂಗಳು ಜೈಲು

Prasthutha|

ನವದೆಹಲಿ: ದೆಹಲಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸಿದರೆ, ₹ 200 ದಂಡ ಹಾಗೂ 6 ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಪರಿಸರ ಸಚಿವ ಗೋಪಾಲ್ ರಾಯ್ ಹೇಳಿದ್ದಾರೆ.

- Advertisement -

ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ಪಟಾಕಿಗಳ ಉತ್ಪಾದನೆ, ಸಂಗ್ರಹ ಹಾಗೂ ಮಾರಾಟ ಮಾಡಿದವರಿಗೆ ಸ್ಫೋಟಕಗಳ ಕಾಯ್ದೆಯನ್ವಯ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ ₹ 5 ಸಾವಿರ ವರೆಗೆ ದಂಡ ವಿಧಿಸಲು ಅವಕಾಶ ಇದೆ ಎಂದು ಹೇಳಿದರು.

‘ದಿಯೆ ಜಲಾವೋ, ಪಟಾಖೆ ನಹಿ’ (ದೀಪಗಳನ್ನು ಬೆಳಗಿಸಿ, ಪಟಾಕಿಗಳನ್ನಲ್ಲ) ಎಂಬ ಸಾರ್ವಜನಿಕ ಜಾಗೃತಿ ಅಭಿಯಾನಕ್ಕೆ ಅ. 21ರಂದು ಚಾಲನೆ ನೀಡಲಾಗುವುದು. ದೆಹಲಿಯಲ್ಲಿ ಪಟಾಕಿಗಳನ್ನು ಖರೀದಿಸುವುದು ಮತ್ತು ಸಿಡಿಸುವುದು ಭಾರತೀಯ ದಂಡ ಸಂಹಿತೆಯಡಿಯಲ್ಲಿ 200 ರೂಪಾಯಿ ದಂಡ ಮತ್ತು ಆರು ತಿಂಗಳ ಜೈಲು ಶಿಕ್ಷೆಗೆ ಗುರಿಯಾಗುತ್ತದೆ ಎಂದು ರಾಯ್ ಹೇಳಿದರು.

- Advertisement -

ದೆಹಲಿ ಸರ್ಕಾರವು ಶುಕ್ರವಾರ ಕನ್ನಾಟ್ ಪ್ಲೇಸ್ ನ ಸೆಂಟ್ರಲ್ ಪಾರ್ಕ್ ನಲ್ಲಿ 51,000 ದೀಪಗಳನ್ನು ಬೆಳಗಿಸಲಿದೆ.

ಪಟಾಕಿ ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಂಬಂಧ 408 ತಂಡಗಳನ್ನು ರಚಿಸಲಾಗಿದೆ. ಸಹಾಯಕ ಪೊಲೀಸ್ ಕಮಿಷನರ್ ಗಳ ವ್ಯಾಪ್ತಿಯಲ್ಲಿ 210 ತಂಡಗಳನ್ನು ಮತ್ತು ಕಂದಾಯ ಇಲಾಖೆಯಿಂದ 165 ತಂಡಗಳನ್ನು ಮತ್ತು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯಿಂದ 33 ತಂಡಗಳನ್ನು ರಚಿಸಲಾಗಿದೆ ಎಂದು ವಿವರಿಸಿದರು.

ಅಕ್ಟೋಬರ್ 16ಕ್ಕೆ ಅಂತ್ಯಗೊಂಡ ಅವಧಿಯಲ್ಲಿ, ಸ್ಫೋಟಕಗಳ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿ 188 ಪ್ರಕರಣಗಳನ್ನು ದಾಖಲಿಸಲಾಗಿದ್ದು, 2,917 ಕೆ.ಜಿಯಷ್ಟು ಪಟಾಕಿಗಳನ್ನು ಜಪ್ತಿ ಮಾಡಲಾಗಿದೆ ಎಂದೂ ಅವರು ಹೇಳಿದರು. 

ಎಲ್ಲಾ ರೀತಿಯ ಪಟಾಕಿಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ಜನವರಿ 1ರವರೆಗೆ ಸಂಪೂರ್ಣ ನಿಷೇಧಿಸಿ ದೆಹಲಿ ಸರ್ಕಾರ ಸೆಪ್ಟೆಂಬರ್ ನಲ್ಲಿ ಆದೇಶ ಹೊರಡಿಸಿತ್ತು. ಎರಡು ವರ್ಷಗಳಿಂದ ಇಲ್ಲಿ ಈ ಪದ್ಧತಿಯನ್ನು ಅನುಸರಿಸಲಾಗುತ್ತಿದೆ.



Join Whatsapp