ಹೊಸದಿಲ್ಲಿ : ಪೊಲೀಸ್ ಅಧಿಕಾರಿಯೊಬ್ಬರು ಠಾಣೆಯಲ್ಲಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಅಧಿಕಾರಿಯನ್ನು ಪೂರ್ವ ದೆಹಲಿಯ ಪಾಂಡವನಗರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ರಾಹುಲ್ ಸಿಂಗ್ (31) ಎಂದು ಗುರುತಿಸಲಾಗಿದೆ.
ಆಗ್ರಾ ಮೂಲದವರಾದ ರಾಹುಲ್ ಸಿಂಗ್, ಐದು ತಿಂಗಳ ಹಿಂದೆಯಷ್ಟೇ ವಿವಾಹಿತರಾಗಿದ್ದು, ತಮ್ಮ ಕುಟುಂಬದೊಂದಿಗೆ ದೆಹಲಿಯಲ್ಲೇ ವಾಸವಾಗಿದ್ದರು. ಎಂದಿನಂತೆ ಕೆಲಸಕ್ಕೆ ಹಾಜರಾದ ಸಿಂಗ್, ಠಾಣೆಯಲ್ಲಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಹಿರಿಯ ಅಧಿಕಾರಿಗಳ ಶೋಷಣೆಯೇ ರಾಹುಲ್ ಸಿಂಗ್ ಆತ್ಮಹತ್ಯೆಗೆ ಕಾರಣ ಎಂಬುದು ಕುಟುಂಬಸ್ಥರ ಆರೋಪವಾಗಿದ್ದು, ಈ ಹಿನ್ನೆಲೆಯಲ್ಲಿ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ರಾಹುಲ್ ಸಿಂಗ್ ಕುಟುಂಬಸ್ಥರು ಆಗ್ರಹಿಸಿದ್ದಾರೆ.