ಥಾಣೆ: ತಮ್ಮ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಗೆ ಹಾಜರಾಗುವುದರಿಂದ ಶಾಶ್ವತ ವಿನಾಯಿತಿ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ (ಜೆಎಂಎಫ್ಸಿ) ಜೆ.ವಿ.ಪಲಿವಾಲ್ ಮಂಗಳವಾರ ದೂರುದಾರ ಸ್ಥಳೀಯ ಆರ್ಎಸ್ಎಸ್ ಕಾರ್ಯಕರ್ತ ರಾಜೇಶ್ ಕುಂಟೆ ಅವರಿಗೆ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ಮುಂದಿನ ವಿಚಾರಣೆಯನ್ನು ಮೇ 18ಕ್ಕೆ ಮುಂದೂಡಿದರು.
2014 ರಲ್ಲಿ, ಥಾಣೆಯ ಭಿವಂಡಿ ಟೌನ್ ಶಿಪ್ ನಲ್ಲಿ ಕಾಂಗ್ರೆಸ್ ನಾಯಕ ಮಾಡಿದ ಭಾಷಣದವೊಂದರಲ್ಲಿ ಮಹಾತ್ಮ ಗಾಂಧಿಯವರ ಹತ್ಯೆಯ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್) ಇದೆ ಎಂದು ಆರೋಪಿಸಿದ್ದರು. ಇದರ ವಿರುದ್ಧ ಕುಂಟೆ ಅವರು ವಿರುದ್ಧ ಪ್ರಕರಣವನ್ನು ದಾಖಲಿಸಿದ್ದರು. ಈ ಹೇಳಿಕೆಯು ಆರೆಸ್ಸೆಸ್ ನ ಪ್ರತಿಷ್ಠೆಗೆ ಧಕ್ಕೆ ತಂದಿದೆ ಎಂದು ಕುಂಟೆ ದೂರಿನಲ್ಲಿ ತಿಳಿಸಿದ್ದಾರೆ.